ತಿರುವನಂತಪುರಂ: ಕನ್ನಡ ಶಾಲೆಗಳಲ್ಲಿ ಮಲೆಯಾಳಂ ಭಾಷೆ ಕಡ್ಡಾಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದಿಂದ ವ್ಯಕ್ತವಾದ ಆಕ್ಷೇಪಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಭಾಷೆಯನ್ನು ಬಲವಂತವಾಗಿ ಹೇರಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಕೇರಳದ ಅಭಿವೃದ್ಧಿ ಮಾದರಿ ಸದಾ ಸಮಾನತೆ, ಸಹೋದರತ್ವ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ಆಧಾರಿತವಾಗಿದೆ. ನಮ್ಮ ರಾಜ್ಯವು ಜಾತ್ಯತೀತತೆ, ಬಹುತ್ವ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸುವ ಪರಂಪರೆಯನ್ನು ಹೊಂದಿದೆ. ಈ ತತ್ವಗಳಿಗೆ ವಿರುದ್ಧವಾಗಿ ಯಾವುದೇ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಇತ್ತೀಚೆಗೆ ಪ್ರಸ್ತಾಪಗೊಂಡಿರುವ ಮಲೆಯಾಳಂ ಭಾಷಾ ಮಸೂದೆ ಕುರಿತು ತಪ್ಪು ಕಲ್ಪನೆಗಳು ಹರಡಲಾಗುತ್ತಿವೆ ಎಂದು ಅವರು ಹೇಳಿದ್ದಾರೆ. ಈ ಮಸೂದೆ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿತಗೊಳಿಸುವುದಿಲ್ಲ. ಬದಲಾಗಿ, ಕನ್ನಡ ಮತ್ತು ತಮಿಳು ಮಾತನಾಡುವ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಸೂದೆಯಲ್ಲಿ ಉಲ್ಲೇಖವಾಗಿರುವ ಷರತ್ತು 7 ಅತ್ಯಂತ ಮಹತ್ವದ್ದಾಗಿದ್ದು, ಅದು ಯಾವುದೇ ಭಾಷೆಯ ಹೇರಿಕೆಗೆ ಅವಕಾಶ ನೀಡುವುದಿಲ್ಲ. ಈ ಷರತ್ತಿನಡಿ ಭಾಷಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಾಪಾಡಲಾಗಿದೆ. ಅಲ್ಪಸಂಖ್ಯಾತ ಭಾಷಿಕರು ತಮ್ಮ ಮಾತೃಭಾಷೆಯನ್ನು ಬಳಸುವ ಹಕ್ಕು ಹೊಂದಿದ್ದು, ಸರ್ಕಾರವು ಅದಕ್ಕೆ ಸಂಪೂರ್ಣ ಗೌರವ ನೀಡುತ್ತದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಅಧಿಸೂಚಿತ ಪ್ರದೇಶಗಳಲ್ಲಿ ವಾಸಿಸುವ ತಮಿಳು ಮತ್ತು ಕನ್ನಡ ಭಾಷಿಕರು ಸಚಿವಾಲಯ, ಇಲಾಖಾ ಮುಖ್ಯಸ್ಥರು ಹಾಗೂ ಸ್ಥಳೀಯ ಸರ್ಕಾರಿ ಕಚೇರಿಗಳೊಂದಿಗೆ ಅಧಿಕೃತ ಪತ್ರವ್ಯವಹಾರಕ್ಕೆ ತಮ್ಮದೇ ಮಾತೃಭಾಷೆಯನ್ನು ಬಳಸಬಹುದು. ಅದೇ ಭಾಷೆಗಳಲ್ಲಿ ಉತ್ತರಗಳನ್ನು ನೀಡಲಾಗುತ್ತದೆ ಎಂಬುದನ್ನೂ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಕ್ಷೇತ್ರದ ಕುರಿತು ಮಾತನಾಡಿದ ಅವರು, ಮಲೆಯಾಳಂ ಅಲ್ಲದ ಮಾತೃಭಾಷೆಯ ವಿದ್ಯಾರ್ಥಿಗಳು ಶಾಲೆಗಳಲ್ಲಿ ತಮ್ಮ ಇಚ್ಛೆಯ ಭಾಷೆಯನ್ನು ಆಯ್ಕೆಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿ ಲಭ್ಯವಿರುವ ಭಾಷೆಗಳ ಪೈಕಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ವಿದ್ಯಾರ್ಥಿಯ ಮೇಲೂ ಮಲೆಯಾಳಂ ಕಲಿಯಲು ಒತ್ತಾಯ ಇಲ್ಲ ಎಂದು ತಿಳಿಸಿದ್ದಾರೆ..
ಇದಲ್ಲದೆ, ಇತರ ರಾಜ್ಯಗಳು ಅಥವಾ ವಿದೇಶಗಳಿಂದ ಕೇರಳಕ್ಕೆ ಬರುವ ವಿದ್ಯಾರ್ಥಿಗಳನ್ನು 9 ಮತ್ತು 10ನೇ ತರಗತಿ ಅಥವಾ ಹೈಯರ್ ಸೆಕೆಂಡರಿ ಹಂತದಲ್ಲಿ ಮಲೆಯಾಳಂ ಪರೀಕ್ಷೆಗೆ ಹಾಜರಾಗುವಂತೆ ಕಡ್ಡಾಯಗೊಳಿಸಲಾಗುವುದಿಲ್ಲ. ಈ ನಿಯಮವು ಸ್ಪಷ್ಟವಾಗಿ ಮಸೂದೆಯಲ್ಲಿ ಉಲ್ಲೇಖವಾಗಿದೆ ಎಂದು ಸಿಎಂ ಹೇಳಿದ್ದಾರೆ.
ಕೇರಳದ ಭಾಷಾ ನೀತಿ 1963ರ ಅಧಿಕೃತ ಭಾಷಾ ಕಾಯ್ದೆ ಹಾಗೂ ಭಾರತದ ಸಂವಿಧಾನದ 346 ಮತ್ತು 347ನೇ ವಿಧಿಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಸಂವಿಧಾನವು ನೀಡಿರುವ ಭಾಷಾ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ನಿರ್ಧಾರ ಸರ್ಕಾರದ ಉದ್ದೇಶವಲ್ಲ ಎಂದು ಅವರು ತಿಳಿಸಿದ್ದಾರೆ.
“ಭಾರತದ ವೈವಿಧ್ಯತೆ ನಮ್ಮ ಶಕ್ತಿ. ಅದನ್ನು ಆಚರಿಸಬೇಕು, ಬಲವಂತಪಡಿಸಬಾರದು. ಭಾಷೆಯ ಹೆಸರಿನಲ್ಲಿ ಯಾವುದೇ ಸಮುದಾಯದಲ್ಲಿ ಭಯ ಅಥವಾ ಅನುಮಾನ ಹುಟ್ಟಿಸುವ ಪ್ರಯತ್ನಗಳು ಅಸಾಧಾರಣವಾದವು” ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.





