ತಿರುವನಂತಪುರಂ: ಕೇರಳದಲ್ಲಿ ಕಳೆದ ಕೆಲವು ವರ್ಷಗಳಿಂದ ವಿವಾದಕ್ಕೀಡಾಗಿರುವ “ಮಸಾಲಾ ಬಾಂಡ್” ಪ್ರಕರಣ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಉಂಟುಮಾಡಿದೆ. ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಜಾರಿ ನಿರ್ದೇಶನಾಲಯ (ED) ನೋಟಿಸ್ ಜಾರಿಗೊಳಿಸಿದೆ. ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (ಕಿಫ್‌ಬಿ)ಯ ಮಸಾಲಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಡಿ ಈ ನೋಟಿಸ್ ನೀಡಲಾಗಿದೆ.
ಕೇರಳ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕಿಫ್‌ಬಿ ಮೂಲಕ 2019ರಲ್ಲಿ ವಿದೇಶಿ ಹೂಡಿಕೆದಾರರಿಂದ ₹2,150 ಕೋಟಿ ಹಣವನ್ನು ಮಸಾಲಾ ಬಾಂಡ್ ಮೂಲಕ ಸಂಗ್ರಹಿಸಲಾಗಿತ್ತು. ಆದರೆ ಈ ಹಣ ಸಂಗ್ರಹಣೆಯಲ್ಲಿ ಫೆಮಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ED ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರು ಜವಾಬ್ದಾರಿ ಹೊತ್ತವರೆಂದು ಪರಿಗಣಿಸಿ ED ಸಮನ್ಸ್ ಜಾರಿ ಮಾಡಿದೆ.
ಪಿಣರಾಯಿ ವಿಜಯನ್ ಜೊತೆಗೆ ಮಾಜಿ ಹಣಕಾಸು ಸಚಿವ ಮತ್ತು ಸಿಪಿಎಂ ಹಿರಿಯ ನಾಯಕ ಡಾ. ಥಾಮಸ್ ಐಸಾಕ್ ಹಾಗೂ ಕಿಫ್‌ಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕೆ.ಎಂ. ಅಬ್ರಾಹಂ ಅವರಿಗೂ ED ನೋಟಿಸ್ ನೀಡಿದೆ. ಈ ಮೂವರು ಮುಖ್ಯ ಆರೋಪಿಗಳಾಗಿ ಪಟ್ಟಿ ಮಾಡಲಾಗಿದ್ದಾರೆ.
ಕಿಫ್‌ಬಿ ಮೂಲಕ ಮಸಾಲಾ ಬಾಂಡ್ ಇಷ್ಯೂ ಮಾಡಿ ಹಣ ಸಂಗ್ರಹಿಸುವಾಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಪಾಲಿಸದೇ, ರಾಜ್ಯ ಸರ್ಕಾರದ ಖಜಾನೆಗೆ ಸೇರಬೇಕಿದ್ದ ಹಣವನ್ನು ಖಾಸಗಿ ಟ್ರಸ್ಟ್ ಮೂಲಕ ವರ್ಗಾಯಿಸಲಾಗಿದೆ ಎಂಬುದು ED ತನಿಖೆಯ ಮುಖ್ಯ ಆರೋಪ. ಇದರಿಂದ ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ವಿದೇಶಿ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.





