ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ಮತ್ತೆ ಪಟಾಕಿ ಘಟಕದಲ್ಲಿ ಭೀಕರ ದುರಂತ ಸಂಭವಿಸಿದ್ದು, ಕನಿಷ್ಠ 18 ಮಂದಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಕಾಕಿನಾಡ ಜಿಲ್ಲೆಯ ಸಾಮಲಕೋಟ ಮಂಡಲದ ವೆಟ್ಲ ಪಾಲಂ ಗ್ರಾಮದ ಬಳಿ ಇರುವ ‘ಸೂರ್ಯ ಶ್ರೀ’ ಪಟಾಕಿ ತಯಾರಿಕಾ ಘಟಕದಲ್ಲಿ ಇಂದು (ಫೆಬ್ರವರಿ 28) ಮಧ್ಯಾಹ್ನ ಆಕಸ್ಮಿಕವಾಗಿ ಭಾರೀ ಸ್ಫೋಟ ಸಂಭವಿಸಿದೆ. ಘಟನೆಯ ವೇಳೆ ಸುಮಾರು 35 ಕಾರ್ಮಿಕರು ಘಟಕದೊಳಗೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ವಿವರ
ವೆಟ್ಲ ಪಾಲಂ ಮತ್ತು ಜಿ.ಮೇಡಪಾಡು ನಡುವಿನ ಕೃಷಿಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಪಟಾಕಿ ಘಟಕದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅದು ಭಾರೀ ಸ್ಫೋಟಗೊಂಡಿದೆ. ಸ್ಫೋಟಗೊಂಡ ತಕ್ಷಣ ಮೃತದೇಹಗಳು ಘಟನಾ ಸ್ಥಳದಿಂದ ದೂರದ ಹೊಲಗಳವರೆಗೂ ಬಿದ್ದಿವೆ. ದೇಹದ ಅಂಗಾಂಗಗಳು ಚದುರಿಹೋಗಿರುವುದರಿಂದ ಮೃತರನ್ನು ಗುರುತಿಸಲು ಕಷ್ಟವಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳಾ ಕಾರ್ಮಿಕರು ಎನ್ನಲಾಗಿದೆ. ದೈನಂದಿನ ಕೂಲಿಗಾಗಿ ಕೆಲಸ ಮಾಡುತ್ತಿದ್ದರು. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಾಕಿನಾಡ ನಗರಕ್ಕೆ ಸ್ಥಳಾಂತರಿಸುವ ಕಾರ್ಯವೂ ನಡೆಯುತ್ತಿದೆ.
ಸ್ಫೋಟದ ಪ್ರಭಾವದಿಂದ ಸುತ್ತಮುತ್ತಲಿನ ಹಲವು ಮನೆಗಳು ಹಾನಿಗೊಳಗಾಗಿವೆ. ಕಿಟಕಿಗಳ ಗಾಜುಗಳು ಒಡೆದುಹೋಗಿದ್ದು, ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಗ್ರಾಮಸ್ಥರು ಭಯಭೀತರಾಗಿದ್ದು, ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದು, ಸಂಪೂರ್ಣವಾಗಿ ಜ್ವಾಲೆ ನಂದಿಸಲು ಸಾಕಷ್ಟು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಚಂದ್ರಬಾಬು ನಾಯ್ಡು ಸಂತಾಪ ಸೂಚನೆ
ಘಟನೆಯ ಮಾಹಿತಿ ತಿಳಿದ ತಕ್ಷಣ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಗೃಹ ಸಚಿವರಿಗೆ ತುರ್ತು ಸೂಚನೆ ನೀಡಿ ಸ್ಥಳಕ್ಕೆ ತೆರಳುವಂತೆ ಆದೇಶಿಸಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಅವರು, ಪರಿಹಾರ ಕಾರ್ಯಗಳನ್ನು ವೇಗಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಅಗತ್ಯ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
కాకినాడ జిల్లా వేట్లపాలెంలోని బాణాసంచా తయారీ కేంద్రంలో జరిగిన పేలుడు ఘటన తీవ్ర దిగ్భాంతిని కలిగించింది. ఈ ప్రమాదంలో పలువురు ప్రాణాలు కోల్పోవడం విచారకరం. ఘటనపై ఉన్నతాధికారులతో మాట్లాడాను. బాధితులకు అవసరమైన తక్షణ సాయం అందించాలని ఆదేశించాను. సహాయక చర్యలను పర్యవేక్షిస్తున్నాము. బాధిత…
— N Chandrababu Naidu (@ncbn) February 28, 2026
ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಂತಾಪ
ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಸಚಿವರು ಕೂಡ ದುರ್ಘಟನೆ ಕುರಿತು ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಸರ್ಕಾರ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.
ಮೃತರ ಗುರುತಿನ ಪ್ರಕ್ರಿಯೆ ಹಾಗೂ ಸ್ಫೋಟದ ನಿಖರ ಕಾರಣ ಪತ್ತೆಹಚ್ಚಲು ವಿಶೇಷ ತನಿಖಾ ತಂಡ ರಚನೆ ಸಾಧ್ಯತೆ ಇದೆ.





