ಜೈಪುರ: ಕೇರಳದ 19 ವರ್ಷದ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ ಅವರು ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಅದ್ದೂರಿ ಗ್ರ್ಯಾಂಡ್ ಫಿನಾಲೆಯಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಕಾಜಿಯಾ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದ ಕೇರಳದ ಮೊದಲ ಯುವತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಮುಂಬರುವ ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾಜಿಯಾ ಲಿಜ್ ಮೆಜೊ ಭಾರತವನ್ನು ಪ್ರತಿನಿಧಿಸಲಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿರುವ ಅವರು, ಇದೀಗ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪರವಾಗಿ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ.
ಗ್ರ್ಯಾಂಡ್ ಫಿನಾಲೆಯ ಅಂತಿಮ ಸುತ್ತಿನಲ್ಲಿ ಕಾಜಿಯಾ ತಮ್ಮ ಆತ್ಮವಿಶ್ವಾಸ, ಬುದ್ಧಿವಂತಿಕೆ ಮತ್ತು ವೇದಿಕೆ ಮೇಲಿನ ತೀರ್ಪುಗಾರರ ಗಮನ ಸೆಳೆದರು. ತಮಿಳುನಾಡಿನ ವೈಷ್ಣವಿ ಗಣೇಶ್ ಅವರು ಮೊದಲ ರನ್ನರ್ ಅಪ್ ಸ್ಥಾನ ಪಡೆದರೆ, ಗುಜರಾತ್‌ನ ಅನುಶ್ರೀ ಸತವ್ಲೇಕರ್ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಇದೇ ವೇಳೆ ಅನುಶ್ರೀ ಅವರಿಗೆ ‘ಮಿಸ್ ಇಂಟರ್‌ನ್ಯಾಷನಲ್ ಇಂಡಿಯಾ 2026’ ಕಿರೀಟವೂ ಲಭಿಸಿದೆ.
2025ರ ‘ಮಿಸ್ ಯೂನಿವರ್ಸ್ ಇಂಡಿಯಾ’ ವಿಜೇತೆ ಮಣಿಕಾ ವಿಶ್ವಕರ್ಮ ಅವರು ಈ ಬಾರಿಯ ಹೊಸ ವಿಜೇತೆ ಕಾಜಿಯಾ ಲಿಜ್ ಮೆಜೊ ಅವರಿಗೆ ಕಿರೀಟ ತೊಡಿಸಿದರು. ಮಾಜಿ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ನೇತೃತ್ವದ ತೀರ್ಪುಗಾರರ ಮಂಡಳಿಯಲ್ಲಿ ನಟಿಯರಾದ ಊರ್ವಶಿ ರೌಟೇಲಾ ಮತ್ತು ಸೆಲೀನಾ ಜೇಟ್ಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕೇರಳದ ಮಾವೇಲಿಕ್ಕರ ಮೂಲದ ಕಾಜಿಯಾ ಪ್ರಸ್ತುತ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ. 2007ರಲ್ಲಿ ಜನಿಸಿದ ಅವರು ತಮ್ಮ ಶಾಲಾ ಶಿಕ್ಷಣವನ್ನು ಅಬುಧಾಬಿಯಲ್ಲಿ ಪೂರ್ಣಗೊಳಿಸಿದ್ದಾರೆ. ಬಾಲ್ಯದಿಂದಲೇ ಸೌಂದರ್ಯ ಸ್ಪರ್ಧೆ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಕಾಜಿಯಾ, ತಮ್ಮ 17ನೇ ವಯಸ್ಸಿನಲ್ಲೇ ‘ಮಿಸ್ ಟೀನ್ ದಿವ್ಯಾ 2024’ ಪ್ರಶಸ್ತಿಯನ್ನು ಗೆದ್ದು ಗಮನ ಸೆಳೆದಿದ್ದರು.
ಅದಾದ ಬಳಿಕ ‘ಮಿಸ್ ಟೀನ್ ಇಂಟರ್‌ನ್ಯಾಷನಲ್ 2025’ ಸ್ಪರ್ಧೆಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಈ ವರ್ಷ ನಡೆದ ‘ಮಿಸ್ ಯೂನಿವರ್ಸ್ ಕೇರಳ 2026’ ಸ್ಪರ್ಧೆಯಲ್ಲೂ ಕಿರಿಯ ಸ್ಪರ್ಧಿಯಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ಗೆದ್ದು, ತಮ್ಮ ಯಶಸ್ಸಿನ ಪಯಣವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ನಟನೆ ಕ್ಷೇತ್ರದಲ್ಲಿಯೂ ಕಾಜಿಯಾ ಈಗಾಗಲೇ ಹೆಜ್ಜೆ ಇಟ್ಟಿದ್ದಾರೆ. ಮಲಯಾಳಂನ ‘ಶೈಲಾಕ್’ ಸಿನಿಮಾದ ಮೂಲಕ ಅವರು ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ.





