ರಾಂಚಿ: ಜಾರ್ಖಂಡ್‌ನಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಂಚಿಯಲ್ಲಿ JPSC-JSSC ಪರೀಕ್ಷಾರ್ಥಿಗಳು ಹಾಗೂ ಪೊಲೀಸರ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶನಿವಾರ (ಆ.22) ಒಂದೇ ದಿನ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 14 ಮಂದಿಯ ಹೆಸರನ್ನು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಂಚಿಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಗಳು ದಾಖಲಾಗಿವೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಪೊಲೀಸರೊಂದಿಗೆ ಘರ್ಷಣೆ ನಡೆಸಿದು ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ JPSC-JSSC ರಿಫಾರ್ಮ್ಸ್ ಮಂಚ್‌ನ ಕೆಲವು ಪ್ರಮುಖ ನಾಯಕರ ಹೆಸರೂ ಉಲ್ಲೇಖವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಸಂಘರ್ಷ
ಜಾರ್ಖಂಡ್‌ನ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವಿಚಾರವಾಗಿ ಶುಕ್ರವಾರ (ಆ.21) ರಾಂಚಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮೊದಲು ಮಾತಿನ ಚಕಮಕಿ ನಡೆದಿದ್ದು, ಬಳಿಕ ಪರಿಸ್ಥಿತಿ ಸಂಘರ್ಷಕ್ಕೆ ತಿರುಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನಾಕಾರರು ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕೃತಿಗಳನ್ನು ದಹಿಸಲು ಮುಂದಾದರು ಎಂಬ ಆರೋಪವೂ ಕೇಳಿಬಂದಿದೆ.
ಪ್ರತಿಭಟನಾಕಾರರ ಆಕ್ರೋಶಕ್ಕೆ ಪ್ರಮುಖ ಕಾರಣ ಜಾರ್ಖಂಡ್‌ನ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದ ವಿವಾದಗಳು. ಸರ್ಕಾರ ಉದ್ಯೋಗಾಕಾಂಕ್ಷಿಗಳ ಹಿತಾಸಕ್ತಿಯನ್ನು ಕಡೆಗಣಿಸಿದೆ ಹಾಗೂ ಹಲವು ನೇಮಕಾತಿ ಪ್ರಕ್ರಿಯೆಗಳಲ್ಲಿ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು JPSC-JSSC ರಿಫಾರ್ಮ್ಸ್ ಮಂಚ್ ಮುಖಂಡರು ಆರೋಪಿಸಿದ್ದಾರೆ.
14 ಮಂದಿಯ ಹೆಸರು ಉಲ್ಲೇಖ
ಶನಿವಾರ ದಾಖಲಾದ ಮೂರು ಎಫ್‌ಐಆರ್‌ಗಳಲ್ಲಿ ಒಟ್ಟು 14 ಮಂದಿಯ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇವರಲ್ಲಿ JPSC-JSSC ರಿಫಾರ್ಮ್ಸ್ ಮಂಚ್‌ನ ನಾಯಕರಾದ ಕುನಾಲ್ ಪ್ರತಾಪ್ ಸಿಂಗ್, ಪಿಯೂಷ್ ಕುಮಾರ್ ಮತ್ತು ರವೀಂದ್ರ ಪಾಸ್ವಾನ್ ಅವರ ಹೆಸರುಗಳೂ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ 200ಕ್ಕೂ ಹೆಚ್ಚು ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಪ್ರತಿಭಟನೆ ವೇಳೆ ನಡೆದ ಘಟನೆಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರತಿಭಟನೆಯ ವಿಡಿಯೋಗಳು, ಸ್ಥಳದಲ್ಲಿದ್ದವರ ಹೇಳಿಕೆಗಳು ಹಾಗೂ ಇತರ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುವ ಸಾಧ್ಯತೆಯಿದೆ.
ನೇಮಕಾತಿ ರದ್ದತಿ ಆದೇಶಗಳಿಗೆ ಕೋರ್ಟ್ ತಡೆ
ಈ ಮಧ್ಯೆ ಜಾರ್ಖಂಡ್‌ನ ನೇಮಕಾತಿ ವಿಚಾರದಲ್ಲಿ ನ್ಯಾಯಾಂಗ ಬೆಳವಣಿಗೆಯೂ ನಡೆದಿದೆ. ಹಲವು ನೇಮಕಾತಿಗಳನ್ನು ರದ್ದುಗೊಳಿಸುವ ಸರ್ಕಾರದ ಅಧಿಸೂಚನೆಗಳಿಗೆ ಹೈಕೋರ್ಟ್ ತಡೆ ನೀಡಿರುವುದು ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಮತ್ತೊಂದು ಆಯಾಮ ನೀಡಿದೆ.
ಆ.21ರಂದು ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿಗಳ (CDPO) ಹಾಗೂ JSSC-CGL ಪರೀಕ್ಷೆಯ ಮೂಲಕ ನೇಮಕಗೊಂಡವರ ನೇಮಕಾತಿಯನ್ನು ರದ್ದುಗೊಳಿಸಿದ್ದ ಅಧಿಸೂಚನೆಗೆ ನ್ಯಾಯಾಲಯ ತಡೆ ನೀಡಿತ್ತು ಎಂದು ವರದಿಯಾಗಿದೆ.
ಅದೇ ರೀತಿ ಆ.20ರಂದು ಹೊರಡಿಸಲಾಗಿದ್ದ 11ನೇ ಮತ್ತು 13ನೇ JPSC ಪರೀಕ್ಷೆಗಳನ್ನು ರದ್ದುಗೊಳಿಸುವ ಅಧಿಸೂಚನೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳ ನೇಮಕಾತಿಯನ್ನು ರದ್ದುಪಡಿಸುವ ಆದೇಶಕ್ಕೂ ಹೈಕೋರ್ಟ್ ತಡೆ ನೀಡಿತ್ತು.
ಉದ್ಯೋಗಾಕಾಂಕ್ಷಿಗಳ ಆಕ್ರೋಶ
ನೇಮಕಾತಿ ಪರೀಕ್ಷೆಗಳ ಕುರಿತು ನಿರಂತರವಾಗಿ ಎದುರಾಗುತ್ತಿರುವ ವಿವಾದಗಳು ಉದ್ಯೋಗಾಕಾಂಕ್ಷಿಗಳಲ್ಲಿ ಅಸಮಾಧಾನ ಹೆಚ್ಚಿಸಿವೆ. ಪರೀಕ್ಷೆ ನಡೆಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು, ಅಕ್ರಮಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.
ಒಂದೆಡೆ ಪ್ರತಿಭಟನೆ ವೇಳೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದರೆ, ಮತ್ತೊಂದೆಡೆ ನೇಮಕಾತಿ ರದ್ದತಿ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶವಾಗಿದೆ. ಹೀಗಾಗಿ ಜಾರ್ಖಂಡ್‌ನ ನೇಮಕಾತಿ ಪರೀಕ್ಷೆಗಳ ವಿವಾದ ಇದೀಗ ಕಾನೂನು ಮತ್ತು ರಾಜಕೀಯ ಎರಡೂ ಆಯಾಮಗಳನ್ನು ಪಡೆದುಕೊಂಡಿದೆ.





