ಚಿಂತಾಮಣಿ: ಕಲುಷಿತ ನೀರು ಪೂರೈಕೆಯ ಬಗ್ಗೆ ಶೂನ್ಯ ಸಹಿಷ್ಣತೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಜನ ಜಾನುವಾರು ಅಸ್ವಸ್ಥರಾಗದಂತೆ ಎಚ್ಚರಿಕೆ ವಹಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಚಿಂತಾಮಣಿ ತಾಲೂಕು ಪಂಚಾಯತಿ ನೂತನ ಸಭಾ ಭವನದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಾರ್ವಜನಿಕರಿಗೆ ಪೂರೈಕೆ ಮಾಡುವ ಕುಡಿಯುವ ನೀರಿನ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಬೇಕು. ಕೊಳವೆ ಮಾರ್ಗ ಒಡೆದು ತ್ಯಾಜ್ಯ ನೀರು ಸೇರ್ಪಡೆಯಾಗದಂತೆ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.
ಕಲುಷಿತ ನೀರು ಕುಡಿದು ಯಾರೂ ಮೃತಪಡಬಾರದು, ಜನ ಜಾನುವಾರು ಕಾಯಿಲೆ ಬೀಳಬಾರದು. ಅಂತಹ ಪ್ರಕರಣ ವರದಿಯಾದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕೊಳವೆ ಬಾವಿಯ ನೀರಿನಲ್ಲಿ ಪ್ಲೋರೈನಂತಹ ಅಂಶಗಳಿದ್ದು, ಶುದ್ಧ ಮೇಲ್ಮೈ ನೀರಿನ ಮೂಲಕ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಬಹುಗ್ರಾಮ ಮತ್ತು ಏಕ ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ ಎಂದು ಈಶ್ವರ ಬಿ ಖಂಡ್ರೆ ತಿಳಸಿದರು.
ಮುಂದಿನ 30 ವರ್ಷಗಳ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಮೇಲ್ಮೈ ಜಲ ಮೂಲದಿಂದ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಲ ಜೀವನ ಮಿಷನ್ ಅಡಿಯಲ್ಲಿ 1640 ಕಾಮಗಾರಿ ಕೈಗೊಂಡಿದ್ದು, ಶೇ.68ರಷ್ಟು ಕಾಮಗಾರಿಗಳು ಪೂರ್ಣವಾಗಿದ್ದು, ಉಳಿದ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಹಣಕಾಸಿನ ಕೊರತೆ ಇಲ್ಲ ಎಂದು ಹೇಳಿದ ಅವರು, ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ಅಡೆತಡೆ, ತೊಡಕು ಎದುರಾದರೂ ತತ್ ಕ್ಷಣವೇ ದುರಸ್ತಿ ಮಾಡಲು ಕ್ರಮ ವಹಿಸುವಂತೆ ಇಲ್ಲವೇ 24 ಗಂಟೆಗಳ ಒಳಗಾಗಿ ಪರ್ಯಾಯ ಮೂಲದಿಂದ ನೀರು ಪೂರೈಸುವಂತೆ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಪರಿಶ್ರಮ ಜೀವಿಗಳು: ಖಂಡ್ರೆ
ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಪರಿಶ್ರಮ ಜೀವಿಗಳಾಗಿದ್ದರೆ, ಹೂಕೃಷಿ, ತರಕಾರಿ ಕೃಷಿ, ತೋಟಗಾರಿಕೆ ಬೆಳೆಗಳ ಕೃಷಿ ಮಾಡುತ್ತಾರೆ. ಅತಿ ಹೆಚ್ಚು ಟೊಮೇಟೋ ಬೆಳೆಯುತ್ತಾರೆ. ದ್ರಾಕ್ಷಿ, ಅಲಂಕಾರಿಕ ಪುಷ್ಪ ಬೆಳೆಯುತ್ತಾರೆ. ನೀರಿನ ಲಭ್ಯತೆ ಇಲ್ಲದೆಯೂ ಇಷ್ಟು ಶ್ರಮಿಸುವ ರೈತರಿಗೆ ಅಭಿನಂದನೆ ಸಲ್ಲಬೇಕು ಎಂದರು.
ನಕಲಿ ಬಿಲ್ ಸೃಷ್ಟಿಸಿದರೆ ಕ್ರಮ- ಈಶ್ವರ ಖಂಡ್ರೆ ಎಚ್ಚರಿಕೆ
ವಿಬಿಜಿ ರಾಮ್ ಜಿ ಅಡಿಯಲ್ಲಿ ನಕಲಿ ಬಿಲ್ ಸೃಜಿಸಿ, ಕೆಲಸ ಮಾಡದವರನ್ನು ಕೂರಿಸಿ ಫೋಟೋ ತೆಗೆಯುವ ಇತ್ಯಾದಿ ವಂಚನೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಈಶ್ವರ ಖಂಡ್ರೆ ಕಟ್ಟೆಚ್ಚರ ನೀಡಿದರು.
ಇ-ಸ್ವತ್ತು ವಿಳಂಬ ತಪ್ಪಿಸಿ
ಇ-ಸ್ವತ್ತು, 11ಎ, ಮತ್ತು 11ಬಿ ನೀಡಿಕೆಯಲ್ಲಿ ವಿಳಂಬ ಆಗುತ್ತಿದ್ದು, ಇಡೀ ಪ್ರಕ್ರಿಯೆಯನ್ನು ಸರಳೀಕರಿಸಲು ಕ್ರಮ ವಹಿಸಲಾಗಿದೆ. ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಗೂ ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ದಾಖಲೆ ಇಲ್ಲದ ಆಸ್ತಿಗಳಿಗೂ ಸ್ಥಳ ಮಹಜರು ಮಾಡಿ, ವ್ಯಾಜ್ಯಇಲ್ಲದ, ಸ್ವಂತ ಜಮೀನಿದ್ದರೆ ಇ-ಸ್ವತ್ತು ನೀಡಿಕೆ ನೀಡಲೂ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಮೂಲಭೂತ ಸೌಕರ್ಯ ಕಲ್ಪಿಸಿದರೆ, ನಗರಗಳ ಮೇಲಿನ ಒತ್ತಡ ತಗ್ಗುತ್ತದೆ. ಗ್ರಾಮಗಳಿಂದ ನಗರಗಳತ್ತ ವಲಸೆ ಹೋಗುವುದು ತಪ್ಪುತ್ತದೆ. ಹೀಗಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ವಿಬಿಜಿ ರಾಮ್ ಜಿ ಅಡಿ ಉತ್ತಮ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದೂ ತಿಳಿಸಿದರು.





