ಜಮ್ಮು ಮತ್ತು ಕಾಶ್ಮೀರ ಪೊಲೀಸರು ಒಂದು ದೊಡ್ಡ ಭಯೋತ್ಪಾದಕ ಜಾಲವನ್ನು ಬಹಿರಂಗಪಡಿಸಿದ್ದಾರೆ. ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ಮಾಜಿ ವೈದ್ಯ ಡಾ. ಅದೀಲ್ ಅಹ್ಮದ್ ರಾಥರ್ ಅವರ ಬಂಧನ ಮತ್ತು ಬಹಿರಂಗಪಡಿಸುವಿಕೆಯ ಮೇರೆಗೆ, ಹರಿಯಾಣದ ಫರಿದಾಬಾದ್‌ನಿಂದ 300 ಕೆಜಿ RDX , AK-47 ರೈಫಲ್ ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತನಾದ ಡಾ. ಅದೀಲ್ ಅಹ್ಮದ್ ರಾಥರ್ ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿ. ಅಬ್ದುಲ್ ಮಜೀದ್ ರಾಥರ್ ಅವರ ಪುತ್ರನಾದ ಅವರು, ಅನಂತನಾಗ್ ಸರ್ಕಾರಿ ವೈದ್ಯಕೀಯ ಕಾಲೇಜಿನ (GMC Anantnag) ವೈದ್ಯಕೀಯ ವಿಭಾಗದಲ್ಲಿ ಅಕ್ಟೋಬರ್ 24, 2024 ರವರೆಗೆ ಸೇವೆ ಸಲ್ಲಿಸಿದ್ದರು. ನಂತರ ಅವರನ್ನು ಉತ್ತರ ಪ್ರದೇಶದ ಸಹರಾನ್ಪುರಕ್ಕೆ ವರ್ಗಾವಣೆ ಮಾಡಲಾಗಿತ್ತು.
ಪೊಲೀಸರ ಮಾಹಿತಿ ಪ್ರಕಾರ, ವೈದ್ಯಕೀಯ ವೃತ್ತಿಯ ನಂತರ ಡಾ. ರಾಥರ್ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ಜೊತೆ ಸಂಪರ್ಕ ಬೆಳೆಸಿದ್ದರು. ಕಳೆದ ತಿಂಗಳು ಶ್ರೀನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಆ ಸಂಘಟನೆಯ ಪ್ರಚಾರ ಪೋಸ್ಟರ್‌ಗಳನ್ನು ಅಂಟಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು.
ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಶ್ರೀನಗರ ಪೊಲೀಸರು ಸಹರಾನ್ಪುರದಲ್ಲಿ ಡಾ. ರಾಥರ್ ಅವರನ್ನು ಬಂಧಿಸಿದರು. ಬಂಧನದ ನಂತರ ನಡೆದ ವಿಚಾರಣೆಯಲ್ಲಿ ಅವರು ನೀಡಿದ ಮಾಹಿತಿಯೇ ದೊಡ್ಡ ಸ್ಫೋಟಕ ಪತ್ತೆಗೆ ಕಾರಣವಾಯಿತು.
ಜೆ & ಕೆ ಪೊಲೀಸರು ಹರಿಯಾಣದ ಫರಿದಾಬಾದ್ ಪ್ರದೇಶದಲ್ಲಿ ದಾಳಿ ನಡೆಸಿ 300 ಕೆಜಿ ಆರ್‌ಡಿಎಕ್ಸ್, ಎಕೆ-47 ರೈಫಲ್ ಹಾಗೂ ಮದ್ದುಗುಂಡುಗಳು ವಶಪಡಿಸಿಕೊಂಡಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ದೇಶದೊಳಗಿನ ಅತಿದೊಡ್ಡ ಉಗ್ರ ವಸ್ತು ಪತ್ತೆಯೊಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಅನಂತನಾಗ್ ಜಂಟಿ ವಿಚಾರಣಾ ಕೇಂದ್ರದ (JIC) ತಂಡವು ಜಿಎಂಸಿ ಅನಂತನಾಗ್ ಆವರಣದೊಳಗೆ ಹುಡುಕಾಟ ನಡೆಸಿತ್ತು. ಆ ಸಮಯದಲ್ಲಿ ಡಾ. ರಾಥರ್ ಅವರ ವೈಯಕ್ತಿಕ ಲಾಕರ್‌ನಿಂದ ಎಕೆ-47 ಅಸಾಲ್ಟ್ ರೈಫಲ್ ಮತ್ತು ಮದ್ದುಗುಂಡುಗಳು ವಶಪಡಿಸಿಕೊಂಡಿದ್ದಾರೆ.
ಬಂಧನದ ನಂತರ ತನಿಖಾಧಿಕಾರಿಗಳು ಮತ್ತೊಬ್ಬ ವೈದ್ಯರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಇಬ್ಬರ ನಡುವಿನ ಸಂಪರ್ಕ, ಶಸ್ತ್ರಾಸ್ತ್ರಗಳ ಮೂಲ ಮತ್ತು ಉಗ್ರ ಸಂಘಟನೆಯೊಂದಿಗೆ ಇರುವ ನಂಟುಗಳ ಬಗ್ಗೆ ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.





