ಗಂಡರ್ಬಾಲ್: ಜಮ್ಮು-ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯ ಕುಲ್ಲನ್ ಪ್ರದೇಶದಲ್ಲಿ ಇಂದು (ಜುಲೈ 30) ಬೆಳಗ್ಗೆ ಭಾರೀ ಮಳೆಯ ನಡುವೆ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಯೋಧರನ್ನು ಕರೆದೊಯ್ಯುತ್ತಿದ್ದ ಬಸ್ ಒಂದು ಕುಲ್ಲನ್ ಸೇತುವೆಯ ತಿರುವಿನಲ್ಲಿ ಜಾರಿ ಸಿಂಧ್ ನದಿಗೆ ಉರುಳಿ ಬಿದ್ದಿದೆ. ಈ ಘಟನೆಯಿಂದ ಬಸ್‌ನಲ್ಲಿದ್ದ ಹಲವರು ನಾಪತ್ತೆಯಾಗಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ.
ಗಂಡರ್ಬಾಲ್ ಎಸ್‌ಎಸ್‌ಪಿ ಖಲೀಲ್ ಅಹ್ಮದ್ ಪೊಸ್ವಾಲ್ ಅವರ ಪ್ರಕಾರ, ಈ ಬಸ್ ಯೋಧರನ್ನು ಕರೆದೊಯ್ಯಲು ಗೊತ್ತುಪಡಿಸಲಾದ ಬಸ್ ಆಗಿತ್ತು, ಆದರೆ ಚಾಲಕನಿಗೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF), ರಾಜ್ಯ ವಿಪತ್ತು ನಿರ್ವಹಣಾ ದಳ (SDRF) ಗಂಡರ್ಬಾಲ್, ಮತ್ತು SDRF ಗುಂಡ್ ಉಪ-ವಿಭಾಗದ ತಂಡಗಳು ಸ್ಥಳದಲ್ಲಿ ಜಂಟಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ.
ಭಾರೀ ಮಳೆ ಮತ್ತು ತೀವ್ರವಾದ ನದಿಯ ಪ್ರವಾಹದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಸವಾಲುಗಳು ಎದುರಾಗಿವೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.