ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಈಗ ತೀವ್ರ ಕಾರ್ಯಾಚರಣಾ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಸತತ ನಾಲ್ಕನೇ ದಿನವೂ ದೇಶಾದ್ಯಂತ 550ಕ್ಕೂ ಹೆಚ್ಚು ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಲಕ್ಷಾಂತರ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ರಾತ್ರಿಯಿಡೀ ಕಾಯುತ್ತಾ, ಆಹಾರ-ನೀರು ಇಲ್ಲದೆ, ಶೌಚಾಲಯಕ್ಕೂ ಹೋಗಲಾಗದೆ ಪರದಾಡುತ್ತಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಆಕ್ರೋಶ
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೆಹಲಿ, ಮುಂಬೈ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ ಮತ್ತು ಗೋವಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಪ್ರಯಾಣಿಕರು ಕುಳಿತುಕೊಳ್ಳಲು ಜಾಗ ಇಲ್ಲದೆ, ಚಳಿ ನಡುವೆ ನಿಲ್ಲುವ ಪರಿಸ್ಥಿತಿ ಎದುರಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ದೂರಗಳು ಹರಿದುಬರುತ್ತಿವೆ.
ಇಂಡಿಗೋ ಸಿಬ್ಬಂದಿಯಿಂದ ಸ್ಪಷ್ಟನೆ ಸಿಗದೇ ಬೇಸತ್ತು ಹಲವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಟಿಕೆಟ್‌ಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ವಿಮಾನ ಹಾರದೇ, ಒಳಗೆ ಹೋಗಲಾಗದೇ, ಹೊರಗೆ ಬರಲಾಗದೇ ಕಷ್ಟ ಅನುಭವಿಸಿದ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ ವಿಮಾನ ನಿಲ್ದಾಣದಲ್ಲಿ ಎಷ್ಟು ರದ್ದು?
ಮಾಹಿತಿ ಪ್ರಕಾರ
-
ದೆಹಲಿ – 172 ವಿಮಾನ
-
ಮುಂಬೈ – 118 ವಿಮಾನ
-
ಬೆಂಗಳೂರು – 100 ವಿಮಾನ
-
ಹೈದರಾಬಾದ್ – 75 ವಿಮಾನ
-
ಕೋಲ್ಕತ್ತಾ – 35 ವಿಮಾನ
-
ಚೆನ್ನೈ – 26 ವಿಮಾನ
-
ಗೋವಾ – 11 ವಿಮಾನ
ಇವುಗಳ ಹೊರತಾಗಿಯೂ ಹಲವು ವಿಮಾನ ನಿಲ್ದಾಣಗಳಲ್ಲಿ ರದ್ದಾಗಿದ್ದು ಹಾಗೂ ವಿಳಂಬವಾಗಿರುವ ಬಗ್ಗೆ ವರದಿಯಾಗಿದೆ.
ಅಡಚಣೆಗೆ ಕಾರಣವೇನು?
ಮೂಲಗಳ ಪ್ರಕಾರ, ಇಂಡಿಗೋಗೆ ಪೈಲಟ್‌ಗಳು ಮತ್ತು ಕ್ಯಾಬಿನ್ ಕ್ರೂ ಸಿಬ್ಬಂದಿ ಲಭ್ಯತೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ. ಕೆಲ ಸಿಬ್ಬಂದಿ ರಜೆಗೆ ಹೋಗಿರುವುದು, ಕೆಲವರು ಶಿಫ್ಟ್ ಸಮಸ್ಯೆ, ತಾಂತ್ರಿಕ ಸಿಬ್ಬಂದಿ ಕೊರತೆ ಇತ್ಯಾದಿ ಕಾರಣ ಹೇಳಲಾಗುತ್ತಿದೆ. ಆದರೆ ಸಂಸ್ಥೆಯು ಅಧಿಕೃತ ಕಾರಣ ಸ್ಪಷ್ಟಪಡಿಸಿಲ್ಲ.
ಸರ್ಕಾರದಿಂದ ತುರ್ತು ಪರಿಶೀಲನೆ
ವಿಮಾನ ರದ್ದು ಮತ್ತು ವಿಳಂಬಗಳು ಹೆಚ್ಚುತ್ತಿದ್ದಂತೆ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಇಂಡಿಗೋ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿತು.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರ ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕು. ವಿಮಾನ ನಿಲ್ದಾಣಗಳಲ್ಲಿ ಸಿಬ್ಬಂದಿಯನ್ನು ಹೆಚ್ಚಿಸಬೇಕು. ಸಾಮಾನ್ಯ ಕಾರ್ಯಾಚರಣೆಯನ್ನು ಶೀಘ್ರ ಪುನರುಜ್ಜೀವನಗೊಳಿಸಬೇಕು ಎಂಬ ಆದೇಶಗಳನ್ನು ನೀಡಿರುವುದಾಗಿ DGCA ಪ್ರಕಟಿಸಿದೆ. ಸಚಿವಾಲಯವು ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇಟ್ಟುಕೊಂಡಿರುವುದಾಗಿ ತಿಳಿಸಿದೆ.
ಪ್ರಯಾಣಿಕರಿಗೆ DGCA ಸಲಹೆ
DGCA ಅಧಿಕಾರಿಗಳು ತುರ್ತು ಪ್ರಯಾಣಿಕರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
-
ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಇಂಡಿಗೋ ಆಪ್ ಅಥವಾ ವೆಬ್‌ಸೈಟ್ ಪರಿಶೀಲಿಸಬೇಕು
-
ಸಂದೇಶ ಅಥವಾ ಇಮೇಲ್ ಮೂಲಕ ಬರುವ ಫ್ಲೈಟ್ ಅಪ್ಡೇಟ್‌ಗಳನ್ನು ಗಮನಿಸಬೇಕು
-
ರದ್ದತಿ ಆಗಿದ್ದರೆ ರಿಫಂಡ್ ಅಥವಾ ರೀ-ಬುಕ್ಕಿಂಗ್ ಆಯ್ಕೆಗಳನ್ನು ತಕ್ಷಣ ಬಳಸಿಕೊಳ್ಳಬೇಕು
ಇಂಡಿಗೋ ಅಧಿಕೃತ ಪ್ರತಿಕ್ರಿಯೆ
ಇಂಡಿಗೋ ತನ್ನ ಹೇಳಿಕೆಯಲ್ಲಿ, “ಕಾರ್ಯಾಚರಣೆಯ ವ್ಯತ್ಯಯಗಳನ್ನು ಸರಿಹೊಂದಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಶೀಘ್ರದಲ್ಲೇ ಸೇವೆಗಳು ಸಾಮಾನ್ಯ ಸ್ಥಿತಿಗೆ ಬರಲಿವೆ” ಎಂದು ತಿಳಿಸಿದ್ದಾರೆ. ಆದರೆ ನಿಖರವಾಗಿ ಯಾವಾಗ ಪರಿಸ್ಥಿತಿ ಹದಗೆಡುತ್ತದೆ ಎಂಬುದಕ್ಕೆ ಸಂಸ್ಥೆ ಸ್ಪಷ್ಟ ಉತ್ತರ ನೀಡಿಲ್ಲ.





