ಭಾರತದ ಇತಿಹಾಸದಲ್ಲಿ ಭಯೋತ್ಪಾದನೆಯ ಭಯಾನಕ ಮುಖವನ್ನು ತೋರಿಸುವ ಅನೇಕ ಘಟನೆಗಳಿವೆ. ಅದರಲ್ಲಿ ಕಾರ್ ಬಾಂಬ್ ಸ್ಫೋಟಗಳು ಮುಖ್ಯವಾದವು. ಇವುಗಳು ಕೇವಲ ಆಸ್ತಿಪಾಸ್ತಿಗಳನ್ನು ನಾಶಪಡಿಸುವುದಲ್ಲದೆ, ನೂರಾರು ಜನರ ಜೀವಗಳನ್ನು ಬಲಿತೆಗೆದುಕೊಂಡಿವೆ. ಇಂತಹ ದಾಳಿಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಿವೆ. ಭಾರತದಲ್ಲಿ ನಡೆದ ಕೆಲವು ಪ್ರಮುಖ ಕಾರ್ ಬಾಂಬ್ ಸ್ಫೋಟಗಳನ್ನು ನೋಡೋಣ.
1993ರ ಮುಂಬೈ ಕಾರ್ ಬಾಂಬ್ ಸ್ಫೋಟ
1993ರ ಮಾರ್ಚ್ 12ರಂದು ಮುಂಬೈಯಲ್ಲಿ ನಡೆದ ಸರಣಿ ಸ್ಫೋಟ ನಡೆದಿತ್ತು. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೇರಿದಂತೆ ನಗರದ ವಿವಿಧ ಸ್ಥಳಗಳಲ್ಲಿ ಒಟ್ಟು 12 ಕಾರ್ ಬಾಂಬ್ ಸ್ಫೋಟಗೊಂಡಿದ್ದವು. ಈ ಬಾಂಬ್ ಸ್ಫೋಟಕ್ಕೆ ಆರ್‌ಡಿಎಕ್ಸ್ ಸ್ಫೋಟಕಗಳನ್ನು ಬಳಸಲಾಗಿತ್ತು. ಈ ದಾಳಿಯಲ್ಲಿ ಹಲವು ಜನ ಸಾವನ್ನಪ್ಪಿದ್ದರು, ನೂರಾರು ಮಂದಿ ಗಾಯಗೊಂಡಿದ್ದರು. ಈ ಘಟನೆಯ ಹಿಂದೆ ಡಾನ್ ದಾವೂದ್ ಇಬ್ರಾಹಿಂ ಮತ್ತು ಅವನ ಸಹಚರರ ಕೈವಾಡವಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಇದರಿಂದ ಮುಂಬೈ ನಗರದ ಜನರಲ್ಲಿ ಆತಂಕ ಮತ್ತು ಭಯದ ವಾತಾವರಣ ಸೃಷ್ಟಿಯಾಯಿತು.
1998ರ ಕೊಯಮತ್ತೂರು ಸ್ಫೋಟ
1998ರ ಫೆಬ್ರುವರಿ 14ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಮತ್ತೊಂದು ಭಯಾನಕ ಸ್ಫೋಟ ನಡೆದಿತ್ತು. ಸರಣಿ ಕಾರ್ ಬಾಂಬ್ ಸ್ಫೋಟಗಳು ಸಂಭವಿಸಿ, 58 ಮಂದಿ ಮೃತಪಟ್ಟಿದ್ದರು. 250 ಜನರು ಗಾಯಗೊಂಡಿದ್ದರು. ಈ ಘಟನೆಯ ಹಿಂದೆ ಅಲ್-ಉಮ್ಮಾ ಸಂಘಟನೆಯ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಎಟಿಎಸ್, ಕೊಯಮತ್ತೂರು ನಗರ ಪೊಲೀಸರೊಂದಿಗೆ ಸಮನ್ವಯದೊಂದಿಗೆ, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ವಾಂಟೆಡ್ ಆರೋಪಿಗಳಾದ ಅಬೂಬಕರ್ ಸಿದ್ದಿಕ್ ಮತ್ತು ಮೊಹಮ್ಮದ್ ಅಲಿ ಅಲಿಯಾಸ್ ಯೂನಸ್ ಅವರನ್ನು ಬಂಧಿಸಿತ್ತು.
2001ರ ಜಮ್ಮು ಕಾಶ್ಮೀರ ವಿಧಾನಸಭೆ ದಾಳಿ
2001ರ ಸೆಪ್ಟೆಂಬರ್ 30ರಂದು ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಬಳಿ ಕಾರ್ ಬಾಂಬ್ ಸ್ಫೋಟ ನಡೆದಿತ್ತು. ಇದು ಜೈಶ್-ಎ-ಮೊಹಮ್ಮದ್ ಸಂಘಟನೆಯ ಕೃತ್ಯ ಎಂದು ಅನುಮಾನ ವ್ಯಕ್ತವಾಗಿತ್ತು. ಈ ದಾಳಿಯಲ್ಲಿ 27 ಮಂದಿ ದುರ್ಮರಣ ಹೊಂದಿದರು, ಅದರಲ್ಲಿ ಸೇನಾ ಸಿಬ್ಬಂದಿ ಮತ್ತು ರಾಜಕೀಯ ನಾಯಕರು ಸೇರಿದ್ದರು.
2003ರ ಮುಂಬೈ ಅವಳಿ ಸ್ಫೋಟ
ಆಗಸ್ಟ್ 25 2003 ರಂದು ಮುಂಬೈ ನಗರದಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಈ ಅವಳಿ ಸ್ಫೋಟಗಳು, ಎರಡು ಜನನಿಬಿಡ ಸ್ಥಳಗಳಲ್ಲಿ ಸಂಭವಿಸಿತ್ತು. ಈ ದಾಳಿಗಳಲ್ಲಿ 54 ಜನರು ಸಾವನ್ನಪ್ಪಿದ್ದು, 240ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸ್ಫೋಟಗಳನ್ನು ಟ್ಯಾಕ್ಸಿಗಳಲ್ಲಿ ಇರಿಸಲಾಗಿದ್ದು, ಬಾಂಬ್‌ಗಳನ್ನು ಬಳಸಿ ನಡೆಸಲಾಗಿತ್ತು. ಲಷ್ಕರ್-ಎ-ತೊಯ್ಬಾ ಮತ್ತು ಸ್ಥಳೀಯ ಭಯೋತ್ಪಾದಕರ ಕೈವಾಡವಿತ್ತು.
ಇಸ್ರೇಲ್ ರಾಯಭಾರ ಕಚೇರಿ ಬಳಿ ಕಾರ್ ಬಾಂಬ್ ಸ್ಫೋಟ
2012ರಲ್ಲಿ ದೆಹಲಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿ ಬಳಿ ಕಾರ್ ಬಾಂಬ್ ಸ್ಫೋಟ ನಡೆದಿತ್ತು. ಇದರಲ್ಲಿ ಇಸ್ರೇಲ್ ವಿದೇಶಾಂಗ ಅಧಿಕಾರಿಗಳು ಸೇರಿದಂತೆ ಹಲವರು ಗಾಯಗೊಂಡರು. ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯ ಕೃತ್ಯವಾಗಿತ್ತು ಎಂದು ಹೇಳಲಾಗಿದೆ.
2019ರ ಪುಲ್ವಾಮಾ ದಾಳಿ
2019ರಲ್ಲಿ ಪುಲ್ವಾಮಾದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟ ದೇಶವನ್ನು ಬೆಚ್ಚಿ ಬೀಳಿಸಿತ್ತು. ಸೇನಾ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ, 44 ಪ್ಯಾರಾ ಮಿಲಿಟರಿ ಯೋಧರು ದುರ್ಮರಣ ಹೊಂದಿದರು. ಜೈಶ್-ಎ-ಮೊಹಮ್ಮದ್ ಸಂಘಟನೆಯ ಆದಿಲ್ ಅಹ್ಮದ್ ದಾರ್ ಈ ದಾಳಿಯನ್ನು ನಡೆಸಿದನು. ಈ ಘಟನೆಯ ನಂತರ ಭಾರತ ಪಾಕಿಸ್ತಾನದ ಬಾಲಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿತು.





