ಗುಜರಾತ್: ಬನಸ್ಕಾಂಥಾ ಜಿಲ್ಲೆಯ ದೀಸಾದ ಧುನ್ನಾ ರಸ್ತೆಯಲ್ಲಿರುವ ಪಟಾಕಿ ಕಾರ್ಖಾನೆ ಮತ್ತು ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಭೀಕರ ಅವಘಡದಲ್ಲಿ 17 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 3 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬಾಯರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಿಯಂತ್ರಣಕ್ಕೆ ಅಗ್ನಿಶಾಮಕ ದಳದವರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದರು. ಆದರೆ, ಬೆಂಕಿಯ ತೀವ್ರತೆಯಿಂದ ಕಾರ್ಖಾನೆಯ ಮೊದಲ ಮಹಡಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಇದರ ಪರಿಣಾಮವಾಗಿ ಹಲವಾರು ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. .
ಅಪಘಾತದ ನಂತರ, ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಂಕಿಯ ತೀವ್ರತೆ ಇಷ್ಟೇ ಅಲ್ಲದೆ, ಸ್ಪ್ಯಾಬ್ ಮುರಿದುಹೋಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಅಡಚಣೆಯಾಗಿದೆ. ಕಾರ್ಖಾನೆಯಲ್ಲಿನ ಸ್ಫೋಟದ ಕಾರಣದಿಂದಾಗಿ ಸ್ಥಳದಲ್ಲಿ ದಟ್ಟವಾದ ಹೊಗೆ ಹರಡಿದ್ದು, ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಘಟನೆ ನಂತರ ದೀಸಾ ಕ್ಷೇತ್ರದ ಶಾಸಕ ಪ್ರವೀಣ್ ಮಾಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರು ಮಾತನಾಡಿ, “ಕಾರ್ಖಾನೆಯ ಅವಶೇಷಗಳಡಿ ಇನ್ನೂ ಹಲವಾರು ಕಾರ್ಮಿಕರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಈಗಾಗಲೇ ಐದು ಜನರನ್ನು ಸುರಕ್ಷಿತವಾಗಿ ಹೊರತೆಗೆರಲಾಗಿದೆ,” ಎಂದು ಮಾಹಿತಿ ನೀಡಿದರು.
ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ
ಪಟಾಕಿ ಕಾರ್ಖಾನೆಯ ಮಾಲೀಕರಾದ ಖುಬ್ಬಂದ್ ಸಿಂಧಿ ಕಾರ್ಖಾನೆಗೆ ಹೊರಗಿನಿಂದ ಸ್ಫೋಟಕಗಳನ್ನು ತರಿಸಿಕೊಂಡು ಪಟಾಕಿಗಳನ್ನು ತಯಾರಿಸುತ್ತಿದ್ದರು. ಆದರೆ, ಈ ಕಾರ್ಖಾನೆಗೆ ಸರ್ಕಾರದ ಅನುಮತಿ ಮತ್ತು ಪರವಾನಗಿ ಇತ್ತೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಸರ್ಕಾರ ನಿರ್ಧಾರ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಲಿದೆ.
ಘಟನೆಯಲ್ಲಿ ಗಾಯಗೊಂಡ ಎಲ್ಲರನ್ನು ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೀಸಾ ಎಸ್‌ಡಿಎಂ ನೇಹಾ ಪಾಂಚಾಲ್ ತಿಳಿಸಿದ್ದಾರೆ. ಆರು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆರು ಜನರಲ್ಲಿ ಮೂವರು ಶೇಕಡಾ 40 ಕ್ಕಿಂತ ಹೆಚ್ಚು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಅವರ ಸ್ಥಿತಿಕೂಡ ಗಂಭೀರವಾಗಿದೆ.
ಅಗ್ನಿ ಅವಘಡದ ನಂತರ ಬಿಗಿ ಭದ್ರತೆ
ಪೊಲೀಸರು ಘಟನಾ ಸ್ಥಳದ ಸುತ್ತಮುತ್ತ ಭದ್ರತಾ ವ್ಯವಸ್ಥೆ ಜೋರಾಗಿದೆ. ಇಂತಹ ಘಟನೆಗಳು ಪುನಃ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳು, ಶಾಸಕ ಮತ್ತು ಅಧಿಕಾರಿಗಳು ಸಭೆ ನಡೆಸಿದ್ದಾರೆ.





