ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಸಜ್ಜಾಗಿರುವ ದೇಶಾದ್ಯಂತ ಗ್ರಾಹಕರಿಗೆ ದೊಡ್ಡ ಆಘಾತಯೊಂದು ಎದುರಾಗುವ ಸಾಧ್ಯತೆ ಇದೆ. ಅಮೆಜಾನ್, ಸ್ವಿಗ್ಗಿ, ಜೊಮ್ಯಾಟೊ, ಫ್ಲಿಪ್‌ಕಾರ್ಟ್, ಬ್ಲಿಂಕಿಟ್, ಝೆಪ್ಟೋ ಸೇರಿದಂತೆ ಪ್ರಮುಖ ಆಹಾರ ವಿತರಣಾ ಮತ್ತು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ವಿತರಣಾ ಕಾರ್ಮಿಕರು ಡಿಸೆಂಬರ್ 25 ಮತ್ತು ಡಿಸೆಂಬರ್ 31, 2025ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಗಿಗ್ ಆರ್ಥಿಕತೆಯಲ್ಲಿ ಕೆಲಸದ ಪರಿಸ್ಥಿತಿಗಳು ದಿನದಿಂದ ದಿನಕ್ಕೆ ಹದಗೆಡುತ್ತಿವೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿದ್ದು, ಕಂಪನಿಗಳ ಮೇಲಿನ ಒತ್ತಡ ಹೆಚ್ಚಿಸುವ ಉದ್ದೇಶದಿಂದಲೇ ಈ ಮುಷ್ಕರ ಘೋಷಿಸಲಾಗಿದೆ ಎಂದು ತಿಳಿಸಿವೆ. ಈ ಮುಷ್ಕರಕ್ಕೆ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ಹಾಗೂ ಇಂಡಿಯನ್ ಫೆಡರೇಶನ್ ಆಫ್ ಆ್ಯಪ್ ಆಧಾರಿತ ಸಾರಿಗೆ ಕಾರ್ಮಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ನಗರಗಳು ಮಾತ್ರವಲ್ಲದೆ, ಪ್ರಮುಖ ಟಿಯರ್–2 ನಗರಗಳಲ್ಲಿಯೂ ವಿತರಣಾ ಕಾರ್ಮಿಕರು ಈ ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಹಬ್ಬದ ದಿನಗಳಲ್ಲಿ ಆಹಾರ, ಕಿರಾಣಿ ವಸ್ತುಗಳು ಮತ್ತು ಆನ್‌ಲೈನ್ ಪಾರ್ಸೆಲ್‌ಗಳ ಮೇಲೆ ಜನರ ಅವಲಂಬನೆ ಹೆಚ್ಚಿರುವ ಕಾರಣ, ಈ ಮುಷ್ಕರವು ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಷ್ಕರದ ಹಿಂದಿನ ಪ್ರಮುಖ ಕಾರಣಗಳು ಏನು?
ಯೂನಿಯನ್‌ಗಳ ಪ್ರಕಾರ, ಪ್ಲಾಟ್‌ಫಾರ್ಮ್ ಕಂಪನಿಗಳು ವೇತನ, ಕೆಲಸದ ಗುರಿಗಳು ಮತ್ತು ಪ್ರೋತ್ಸಾಹಕಗಳನ್ನು ನಿರ್ಧರಿಸುವಲ್ಲಿ ಅಲ್ಗಾರಿಥಮ್‌ಗಳ ಮೂಲಕ ಸಂಪೂರ್ಣ ನಿಯಂತ್ರಣ ಸಾಧಿಸಿವೆ. ಕಾರ್ಮಿಕರ ಮೇಲೆ ಅಪಾಯಗಳನ್ನು ತಳ್ಳಲಾಗುತ್ತಿದ್ದು, ಡೆಲಿವರಿ ಗಡುವುಗಳು ದಿನೇದಿನೇ ಬಿಗಿಯಾಗುತ್ತಿವೆ. ಪ್ರೋತ್ಸಾಹಕ ನಿಯಮಗಳನ್ನು ನಿರಂತರವಾಗಿ ಬದಲಾಯಿಸಲಾಗುತ್ತಿದ್ದು, ಇನ್ನೊಂದೆಡೆ ಕಾರ್ಮಿಕರ ಆದಾಯದಲ್ಲಿ ಭಾರೀ ಕುಸಿತ ಕಂಡುಬರುತ್ತಿದೆ ಎಂದು ಆರೋಪಿಸಲಾಗಿದೆ.
ವಿಶೇಷವಾಗಿ ಹಬ್ಬದ ದಿನಗಳು ಮತ್ತು ಭಾರೀ ಬೇಡಿಕೆಯ ಸಮಯದಲ್ಲಿ ಕಾರ್ಮಿಕರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಆದರೆ ಈ ಹೆಚ್ಚುವರಿ ಶ್ರಮಕ್ಕೆ ತಕ್ಕ ಪರಿಹಾರ ದೊರೆಯುತ್ತಿಲ್ಲ ಎಂಬುದು ಕಾರ್ಮಿಕರು ಆರೋಪಿಸಿದ್ದಾರೆ.
ಗಿಗ್ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು
ಯೂನಿಯನ್‌ಗಳ ಹೇಳಿಕೆಯಂತೆ, ವಿತರಣಾ ಕಾರ್ಮಿಕರು ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
-
ಅನಿಶ್ಚಿತ ಮತ್ತು ದೀರ್ಘ ಕೆಲಸದ ಸಮಯ
-
ಅಸುರಕ್ಷಿತ ಡೆಲಿವರಿ ಗಡುವುಗಳು
-
ಕಾರಣವಿಲ್ಲದೆ ಐಡಿ ಬ್ಲಾಕ್ ಮಾಡುವ ಕ್ರಮ
-
ಆದಾಯದ ಸ್ಥಿರತೆ ಇಲ್ಲದಿರುವುದು
-
ಆರೋಗ್ಯ ವಿಮೆ, ಅಪಘಾತ ವಿಮೆ ಸೇರಿದಂತೆ ಸಾಮಾಜಿಕ ಭದ್ರತೆಯ ಕೊರತೆ
ಇಷ್ಟೆಲ್ಲ ಸಮಸ್ಯೆಗಳಿದ್ದರೂ, ದೂರು ಸಲ್ಲಿಸಲು ಅಥವಾ ಸಮಸ್ಯೆ ಪರಿಹಾರಕ್ಕಾಗಿ ಅಪ್ಲಿಕೇಶನ್‌ಗಳಲ್ಲಿ ಪರಿಣಾಮಕಾರಿ ವ್ಯವಸ್ಥೆಗಳಿಲ್ಲ ಎಂಬುದೂ ಕಾರ್ಮಿಕರ ಆರೋಪವಾಗಿದೆ.
ಕಾರ್ಮಿಕರ ಬೇಡಿಕೆಗಳು
ಗಿಗ್ ಕಾರ್ಮಿಕರು ಸರ್ಕಾರ ಹಾಗೂ ಪ್ಲಾಟ್‌ಫಾರ್ಮ್ ಕಂಪನಿಗಳ ಮುಂದೆ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
-
ಕನಿಷ್ಠ ವೇತನ ಮತ್ತು ಪಾರದರ್ಶಕ ಪಾವತಿ ವ್ಯವಸ್ಥೆ
-
ಅಪಘಾತ ಮತ್ತು ಆರೋಗ್ಯ ವಿಮೆ
-
ಐಡಿ ಬ್ಲಾಕ್ ಮಾಡುವ ಮುನ್ನ ಸ್ಪಷ್ಟ ಕಾರಣ ಮತ್ತು ವಿಚಾರಣೆ
-
ದೂರುಗಳಿಗೆ ತ್ವರಿತ ಪರಿಹಾರ ವ್ಯವಸ್ಥೆ
-
ಗಿಗ್ ಕಾರ್ಮಿಕರನ್ನು ಅಧಿಕೃತ ಕಾರ್ಮಿಕರಾಗಿ ಗುರುತಿಸುವ ಕಾನೂನು ಭದ್ರತೆ
ಡಿಸೆಂಬರ್ 25 ಮತ್ತು 31ರಂದು ಆಹಾರ ವಿತರಣೆ, ಗ್ರಾಸರಿ ಡೆಲಿವರಿ ಹಾಗೂ ಆನ್‌ಲೈನ್ ಆರ್ಡರ್‌ಗಳಲ್ಲಿ ವಿಳಂಬ ಅಥವಾ ಸಂಪೂರ್ಣ ಸ್ಥಗಿತ ಉಂಟಾಗುವ ಸಾಧ್ಯತೆ ಇದೆ.





