ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನ್ನು ನಡುಗಿಸಿದ ಭಯಾನಕ ಕಾರು ಸ್ಪೋಟದ ಪ್ರಮುಖ ಶಂಕಿತ ಡಾ. ಮೊಹಮ್ಮದ್ ಉಮರ್ ಅವರ ಮೊದಲ ಫೋಟೋವನ್ನು ಮಂಗಳವಾರ ತನಿಖಾ ಸಂಸ್ಥೆಗಳು ಬಿಡುಗಡೆ ಮಾಡಿವೆ. ಈ ಘಟನೆಯು ಸೋಮವಾರ ಸಂಜೆ ಕೆಂಪು ಕೋಟೆಯ ಬಳಿ ನಡೆದಿದ್ದು, ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯನ್ನು ಆತ್ಮಾಹುತಿ ದಾಳಿಯೆಂದು ಪೊಲೀಸರು ಶಂಕಿಸುತ್ತಿದ್ದು, ಡಾ. ಉಮರ್ ಅವರೇ ಕಾರನ್ನು ಚಾಲನೆ ಮಾಡುತ್ತಾ ಸ್ಫೋಟ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶಂಕಿತ ಡಾ. ಮೊಹಮ್ಮದ್ ಉಮರ್ ಅವರು ಹರ್ಯಾಣದ ಆಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಸ್ಫೋಟಕ ತುಂಬಿದ ಹುಂಡೈ i20 ಕಾರು (ನೋಂದಣಿ ಸಂಖ್ಯೆ: HR 26 CE 7674) ಅವರ ಹೆಸರಿನಲ್ಲಿರುವುದು ಪತ್ತೆಯಾಗಿದೆ. ಘಟನೆಗೂ ಮುನ್ನ ಕಾರಿನಲ್ಲಿ ಕುಳಿತಿರುವ ಉಮರ್ ಅವರ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ. ಸಿಸಿಟಿವಿ ಫೂಟೇಜ್‌ನಲ್ಲಿ ಕಾರು ಕೆಂಪು ಕೋಟೆಯ ಸಮೀಪದ ರಸ್ತೆಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಈ ಸ್ಫೋಟದಿಂದ ಸುತ್ತಮುತ್ತಲಿನ ವಾಹನಗಳು ಮತ್ತು ಕಟ್ಟಡಗಳಿಗೆ ಗಂಭೀರ ಹಾನಿಯಾಗಿದೆ.
ತನಿಖಾಧಿಕಾರಿಗಳು ಈಗಾಗಲೇ ಕಾರಿನ ಮಾಲೀಕನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಮೊಹಮ್ಮದ್ ಸಲ್ಮಾನ್ ಎಂದು ಗುರುತಿಸಲಾಗಿದ್ದು, ಅವರು ಹರ್ಯಾಣ ಮೂಲದವರು. ಸೋಮವಾರ ಸಂಜೆ ನಡೆದ ಸ್ಫೋಟವು ದೆಹಲಿಯ ಕೆಂಪು ಕೋಟೆಯ ಬಳಿ ಸಂಭವಿಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಾವನ್ನಪ್ಪಿದವರಲ್ಲಿ ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸಾಮಾನ್ಯ ಪ್ರಯಾಣಿಕರು ಇದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ರಾಷ್ಟ್ರೀಯ ಭದ್ರತಾ ಸಂಸ್ಥೆ (NIA), ದೆಹಲಿ ಪೊಲೀಸ್ ಮತ್ತು ಇತರ ಕೇಂದ್ರೀಯ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.
ಡಾ. ಉಮರ್ ಅವರ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವರು ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದರೂ, ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆಯೇ? ಅಥವಾ ಇದು ಏಕಾಂಗಿ ದಾಳಿಯೇ? ಎಂಬ ಅನುಮಾನ ಮೂಡಿದೆ.





