ನವದೆಹಲಿ: ದೇಶದ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಇತ್ತೀಚೆಗೆ ಕಾಕ್ರೋಚ್ ಜನತಾ ಪಾರ್ಟಿ (“Cockroach Janata Party”) ಎಂಬ ಹೆಸರಿನ ಚಳವಳಿ ಸಂಚಲನ ಸೃಷ್ಟಿಸಿದೆ.. ಯುವಕರು ಹಾಗೂ Gen-Z ಬಳಗ ಈ ಟ್ರೆಂಡ್‌ಗೆ ಭಾರೀ ಪ್ರಮಾಣದಲ್ಲಿ ಸೆಳೆಯುತ್ತಿದ್ದು, ಇನ್‌ಸ್ಟಾಗ್ರಾಮ್, ವಾಟ್ಸ್ಆ್ಯಪ್, ಎಕ್ಸ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಪೋಸ್ಟ್‌ಗಳು, ಮೀಮ್ಸ್ ಹಾಗೂ ವಿಡಿಯೋಗಳು ಹರಿದಾಡುತ್ತಿವೆ. ಆದರೆ ಇದೇ ಕ್ರೇಜ್‌ನ್ನು ಈಗ ಸೈಬರ್ ವಂಚಕರು ಹೊಸ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.
ಸೈಬರ್ ಅಪರಾಧಿಗಳು “ದೇಶ ಬದಲಾಯಿಸಲು ನೀವೂ ಕಾಕ್ರೋಚ್ ಜನತಾ ಪಾರ್ಟಿಗೆ ಸೇರಿ” ಎಂಬ ಹೆಸರಿನಲ್ಲಿ ನಕಲಿ ಜಾಯಿನ್ ಲಿಂಕ್‌ಗಳನ್ನು ವಾಟ್ಸ್ಆ್ಯಪ್ ಮತ್ತು ಇತರೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿಬಿಡುತ್ತಿದ್ದಾರೆ. ಕುತೂಹಲದಿಂದ ಅಥವಾ ಟ್ರೆಂಡ್‌ಗೆ ಆಕರ್ಷಿತರಾಗಿ ಯುವಕರು ಆ ಲಿಂಕ್‌ಗಳನ್ನು ಕ್ಲಿಕ್ ಮಾಡುತ್ತಿದ್ದಂತೆ ದೊಡ್ಡ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಈ ಲಿಂಕ್‌ಗಳು ಸಾಮಾನ್ಯ ವೆಬ್‌ಸೈಟ್‌ಗಳಂತೆಯೇ ಕಾಣಿಸುತ್ತವೆ. ಆದರೆ ಒಮ್ಮೆ ಕ್ಲಿಕ್ ಮಾಡಿದ ತಕ್ಷಣ ಮೊಬೈಲ್‌ಗೆ ವೈರಸ್ ಅಥವಾ ದುಷ್ಕರ್ಮಿ ಸಾಫ್ಟ್‌ವೇರ್ ಪ್ರವೇಶಿಸಿ ಬಳಕೆದಾರರ ವೈಯಕ್ತಿಕ ಮಾಹಿತಿ ಕದಿಯುತ್ತದೆ. ಕೆಲವು ಸಂದರ್ಭಗಳಲ್ಲಿ OTP ಕೂಡ ಬರದೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಯುವಕರು “ಪಾರ್ಟಿಗೆ ಸೇರುವ ಫಾರ್ಮ್” ಎಂದು ಭಾವಿಸಿ ತಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಗಳನ್ನು ನೀಡುತ್ತಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ಕ್ರಿಮಿನಲ್‌ಗಳು, ಮೊಬೈಲ್ ಫೋನ್‌ಗೆ ಪ್ರವೇಶ ಪಡೆದು ಬ್ಯಾಂಕಿಂಗ್ ಆ್ಯಪ್‌ಗಳು, UPI ಹಾಗೂ ಖಾತೆಗಳ ಮೇಲಿನ ನಿಯಂತ್ರಣವನ್ನು ಪಡೆಯುತ್ತಿದ್ದಾರೆ ಎಂದು ತನಿಖಾ ಸಂಸ್ಥೆಗಳು ಎಚ್ಚರಿಸಿವೆ.
ಇದಾಗಲೇ ದೇಶದ ವಿವಿಧ ಭಾಗಗಳಲ್ಲಿ ಹಲವರು ಈ ರೀತಿಯ ವಂಚನೆಗೆ ಬಲಿಯಾಗಿರುವ ಪ್ರಕರಣಗಳು ದಾಖಲಾಗಿವೆ. ಹಣ ಕಳೆದುಕೊಂಡ ಬಳಿಕವೇ ತಮ್ಮ ಮೊಬೈಲ್ ಹ್ಯಾಕ್ ಆಗಿರುವುದು ಹಾಗೂ ಖಾತೆಯಿಂದ ಹಣ ಡೆಬಿಟ್ ಆಗಿರುವುದು ತಿಳಿದು ಹಲವರು ಕಂಗಾಲಾಗಿದ್ದಾರೆ.
ಪೊಲೀಸರು ಹೇಳುವಂತೆ, ಸೈಬರ್ ಅಪರಾಧಿಗಳ ಜಾಲ ಬಹಳ ಬಲಿಷ್ಠವಾಗಿದೆ. ಹಣ ಕದಿಯುತ್ತಿದ್ದಂತೆಯೇ ಅದನ್ನು ಬೇರೆ ಬೇರೆ ಖಾತೆಗಳಿಗೆ ಕ್ಷಣಾರ್ಧದಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಹೀಗಾಗಿ ಒಮ್ಮೆ ಹಣ ಕಳೆದುಕೊಂಡರೆ ಅದನ್ನು ಮರುಪಡೆಯುವುದು ತುಂಬಾ ಕಷ್ಟಕರವಾಗುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಷಯಗಳ ಬಗ್ಗೆ ಹೆಚ್ಚಿನ ಉತ್ಸಾಹ ತೋರಿಸುವವರು ಯಾವುದೇ ಪರಿಶೀಲನೆ ಮಾಡದೇ ಲಿಂಕ್‌ಗಳನ್ನು ಕ್ಲಿಕ್ ಮಾಡುತ್ತಿರುವುದು ಅಪಾಯವನ್ನು ಹೆಚ್ಚಿಸಿದೆ.
ಈ ಹಿನ್ನೆಲೆ ಸಾರ್ವಜನಿಕರಿಗೆ ಪೊಲೀಸರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳು ಕಳುಹಿಸುವ ಯಾವುದೇ WhatsApp ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. “Join Now”, “Register Here”, “Limited Access” ಎಂಬ ರೀತಿಯ ಸಂದೇಶಗಳಿಗೆ ತಕ್ಷಣ ಪ್ರತಿಕ್ರಿಯಿಸದೇ ಅದರ ನಿಜಾಂಶ ಪರಿಶೀಲಿಸಬೇಕು. ಬ್ಯಾಂಕಿಂಗ್ ಮಾಹಿತಿ, OTP, UPI PIN ಅಥವಾ ವೈಯಕ್ತಿಕ ದಾಖಲೆಗಳನ್ನು ಯಾವುದೇ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಬಾರದು ಎಂದು ಸೂಚಿಸಲಾಗಿದೆ.
ಇದೇ ವೇಳೆ ಮೊಬೈಲ್‌ನಲ್ಲಿ ಆಂಟಿವೈರಸ್ ಬಳಕೆ ಮಾಡುವುದು, ಎರಡು ಹಂತದ ಸುರಕ್ಷತಾ ವ್ಯವಸ್ಥೆ (Two-Factor Authentication) ಸಕ್ರಿಯಗೊಳಿಸುವುದು ಹಾಗೂ ಬ್ಯಾಂಕ್ ಖಾತೆಯ ವ್ಯವಹಾರಗಳ ಮೇಲೆ ನಿಗಾ ಇಡುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.





