ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ಯುವ ನೇತೃತ್ವದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ದೆಹಲಿಯ ಜಂತರ್ ಮಂತರ್‌ನಲ್ಲಿ ಮತ್ತೊಂದು ಬೃಹತ್ ಪ್ರತಿಭಟನೆಗೆ (Protest) ಸಜ್ಜಾಗಿದೆ. ಈ ಹೋರಾಟದಲ್ಲಿ ಭಾಗವಹಿಸುವ ಎಲ್ಲಾ ಬೆಂಬಲಿಗರು ತಮ್ಮೊಂದಿಗೆ ಕಡ್ಡಾಯವಾಗಿ ‘ತಟ್ಟೆ’ ಮತ್ತು ‘ಚಮಚ’ ಹಿಡಿದುಕೊಂಡು ಬರಬೇಕೆಂದು ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ಕರೆ ನೀಡಿದ್ದಾರೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿದ್ದು, ಹಲವು ಯುವಕರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ತಟ್ಟೆ-ಚಮಚದ ಹಿಂದಿನ ವ್ಯಂಗ್ಯ
ಕಳೆದ 2020ರ ಕೊರೊನಾ ಸಾಂಕ್ರಾಮಿಕದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವಾರಿಯರ್ಸ್ಗೆ ಕೃತಜ್ಞತೆ ಸಲ್ಲಿಸಲು ದೇಶದ ಜನರಿಗೆ ತಟ್ಟೆ-ಜಾಗಟೆ ಬಾರಿಸಲು ಕರೆ ನೀಡಿದ್ದರು. ಈಗ ಅದೇ ಪರಿಕಲ್ಪನೆಯನ್ನು ಬಳಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧವೇ ವ್ಯಂಗ್ಯವಾಗಿ ಅಸ್ತ್ರವನ್ನಾಗಿಸಲು CJP ಯುವ ಪಡೆ ಮುಂದಾಗಿದೆ. ಪ್ರತಿಭಟನೆಗೂ ಮುನ್ನ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅಭಿಜೀತ್ ದೀಪ್ಕೆ, “ನಾಳಿನ ಪ್ರತಿಭಟನೆಗೆ ಬರುವ ಎಲ್ಲಾ ಬೆಂಬಲಿಗರು ಕಡ್ಡಾಯವಾಗಿ ತಟ್ಟೆ ಮತ್ತು ಚಮಚ ತರಬೇಕು, ಬಾಕಿ ಕಥೆ ನಿಮಗೇ ಗೊತ್ತಿದೆ” ಎಂದು ಹೇಳಿದ್ದಾರೆ.
ಪರೀಕ್ಷಾ ಅಕ್ರಮ ವಿರುದ್ಧ ಹೋರಾಟ
ದೇಶದಲ್ಲಿ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಾದ NEET-UG ಸೇರಿದಂತೆ ಪ್ರಮುಖ ರಾಷ್ಟ್ರೀಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅವ್ಯವಸ್ಥೆಯನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪರೀಕ್ಷಾ ಹಗರಣಗಳ ಸಂಪೂರ್ಣ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಇದರೊಂದಿಗೆ, ಇತ್ತೀಚಿನ ಪರೀಕ್ಷಾ ಗೊಂದಲಗಳಿಂದ ಬೇಸತ್ತು ದೇಶದಲ್ಲಿ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರಧಾನಿ ಮೋದಿಯವರಿಗೆ ಅಭಿಜೀತ್ ದೀಪ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕೇವಲ ಒಂದು ತಿಂಗಳಲ್ಲಿ ಕೋಟ್ಯಂತರ ಬೆಂಬಲ
ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಮೂಲಕ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಆರಂಭವಾದ ಈ ಡಿಜಿಟಲ್ ಆಂದೋಲನಕ್ಕೆ ದೇಶದ ಕೋಟ್ಯಂತರ ಯುವಕರು ಬೆಂಬಲ ನೀಡಿದ್ದಾರೆ. ಜೂನ್ ಮೊದಲ ವಾರದಲ್ಲೂ ಇವರು ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಇಂದು ಮಧ್ಯಾಹ್ನ ಆರಂಭವಾಗಲಿರುವ ಈ ಎರಡನೇ ಬೃಹತ್ ಪ್ರತಿಭಟನೆಗಾಗಿ ದೆಹಲಿ, ಹರಿಯಾಣ, ಪಂಜಾಬ್ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಜಂತರ್ ಮಂತರ್ನತ್ತ ಧಾವಿಸುತ್ತಿದ್ದಾರೆ..
ಬಿಗಿ ಭದ್ರತಾ ವ್ಯವಸ್ಥೆ
ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದೆಹಲಿ ಪೊಲೀಸರು ಬಿಗಿ ಭದ್ರತೆ ಹಾಗೂ ಸಿಸಿಟಿವಿ ಕಣ್ಣಾವಲು ವ್ಯವಸ್ಥೆ ಮಾಡಿದ್ದಾರೆ. ಪ್ರತಿಭಟನೆಯು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲು ಪೊಲೀಸ್ ಪಡೆ ಮತ್ತು ಕೇಂದ್ರೀಯ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಈ ಘಟನೆಯ ಬೆಳವಣಿಗೆಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ನಿಕಟವಾಗಿ ಗಮನಿಸುತ್ತಿವೆ.





