ನವದೆಹಲಿ: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿದ್ದ ‘ಸಂಸತ್ ಚಲೋ’ ಪ್ರತಿಭಟನಾ ರ‍್ಯಾಲಿ ವೇಳೆ ಭಾರೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ ಜೊತೆಗೆ ಅಶ್ರುವಾಯು ಸಿಡಿಸಿದರು.
ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ದೆಹಲಿಯಲ್ಲಿ ಈಗಾಗಲೇ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ನಗರದ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಈ ನಡುವೆಯೂ ಸಾವಿರಾರು ಪ್ರತಿಭಟನಾಕಾರರು ಜಂತರ್ ಮಂತರ್‌ನಿಂದ ಸಂಸತ್ ಭವನದತ್ತ ಮೆರವಣಿಗೆ ಆರಂಭಿಸಿದರು.
ಪ್ರತಿಭಟನಾಕಾರರು ಸಂಸತ್ ಭವನದತ್ತ ಸಾಗುತ್ತಿದ್ದ ವೇಳೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದರು. ಕೆಲವರು ಭದ್ರತಾ ವಲಯವನ್ನು ಮೀರಿ ಮುಂದೆ ಸಾಗಲು ಪ್ರಯತ್ನಿಸಿದ ಹಿನ್ನೆಲೆ ಪರಿಸ್ಥಿತಿ ಉದ್ವಿಗ್ನಗೊಂಡಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮೊದಲು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರು. ಆದರೂ ಪ್ರತಿಭಟನೆ ಮುಂದುವರಿದ ಕಾರಣ ಲಾಠಿಚಾರ್ಜ್ ನಡೆಸಿ, ಬಳಿಕ ಅಶ್ರುವಾಯು ಪ್ರಯೋಗಿಸಿದರು.
ಈ ವೇಳೆ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೇರಿದಂತೆ ಹಲವು ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರ ನಿಖರ ಸಂಖ್ಯೆ ಕುರಿತು ಅಧಿಕಾರಿಗಳು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.
ಪ್ರತಿಭಟನೆಯ ನಂತರ ದೆಹಲಿಯ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾವುದೇ ವದಂತಿಗಳು ಹರಡದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಸತ್ತಿನ ಮಳೆಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ದೆಹಲಿ ನಗರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಈ ಕಾನೂನು ಅನ್ವಯ ದೊಡ್ಡ ಪ್ರಮಾಣದ ಸಾರ್ವಜನಿಕ ಸಭೆ, ಮೆರವಣಿಗೆ ಹಾಗೂ ಪ್ರತಿಭಟನೆಗಳಿಗೆ ಪೂರ್ವಾನುಮತಿ ಅಗತ್ಯವಾಗಿದೆ. ಆದರೆ CJP ನಡೆಸಿದ ಈ ರ‍್ಯಾಲಿಗೆ ಯಾವುದೇ ಅಧಿಕೃತ ಅನುಮತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆ ಆರಂಭಕ್ಕೂ ಮುನ್ನವೇ ದೆಹಲಿ ಪೊಲೀಸರು ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಆದರೂ ಪ್ರತಿಭಟನಾಕಾರರು ಸಂಸತ್ ಚಲೋ ರ‍್ಯಾಲಿಯನ್ನು ಕೈಬಿಡದೆ ಮುಂದುವರಿಸಿದ್ದು, ಅಂತಿಮವಾಗಿ ಪೊಲೀಸ್ ಕ್ರಮಕ್ಕೆ ಕಾರಣವಾಯಿತು.
NEET–2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿರುದ್ಧ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.




