ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಶನಿವಾರ ರಾತ್ರಿ ತೀವ್ರ ಮಳೆಯಾಗಿದ್ದು, ಆರು ಸ್ಥಳಗಳಲ್ಲಿ ಮೇಘಸ್ಫೋಟ (Cloudburst) ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈ ಭಾರೀ ಮಳೆಯಿಂದಾಗಿ ಚೆನ್ನೈಗೆ ಬಂದ ಮೂರು ವಿಮಾನಗಳು ಇಳಿಯಲಾಗದೆ ಬೆಂಗಳೂರಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಚೆನ್ನೈನ ಮನಾಲಿಯಲ್ಲಿ 270 ಎಂಎಂ, ನ್ಯೂ ಮನಾಲಿ ಟೌನ್‌ನಲ್ಲಿ 260 ಎಂಎಂ, ವಿಮ್ಕೋ ನಗರ್‌ನಲ್ಲಿ 230 ಎಂಎಂ ಮಳೆ ಸುರಿದಿದೆ. ಇದರ ಜೊತೆಗೆ, ಎಣ್ಣೋರ್, ಕೊರಟ್ಟೂರು, ಅಯಪಕ್ಕಂ, ಪ್ಯಾರಿಸ್, ಅಂಬತ್ತೂರು, ನೇರಕುಂಡ್ರಂ, ಕೊಳತ್ತೂರು, ಕಾಸಿಮೆಡು, ಮತ್ತು ರೆಡ್ ಹಿಲ್ಸ್‌ನಂತಹ ಚೆನ್ನೈನ ಬಹುತೇಕ ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ. ಒಂದು ಗಂಟೆಯಲ್ಲಿ 100 ಎಂಎಂಗಿಂತ ಹೆಚ್ಚು ಮಳೆಯಾದರೆ ಅದನ್ನು ಮೇಘಸ್ಫೋಟ ಎಂದು ವಿಶ್ವ ಹವಾಮಾನ ಸಂಸ್ಥೆ ಮತ್ತು ಭಾರತೀಯ ಹವಾಮಾನ ಇಲಾಖೆ ವರ್ಗೀಕರಿಸುತ್ತದೆ. ಚೆನ್ನೈನ ಆರು ಸ್ಥಳಗಳಲ್ಲಿ ಈ ಮಾನದಂಡಕ್ಕೆ ತಕ್ಕಂತೆ ಗಂಟೆಗೆ 10 ಸೆಂಟಿಮೀಟರ್‌ಗಿಂತ ಹೆಚ್ಚು ಮಳೆ ದಾಖಲಾಗಿದೆ.
ವಿಮಾನಗಳ ಮಾರ್ಗ ಬದಲಾವಣೆ:
ಭಾರೀ ಮಳೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದ ಕಾರಣ, ಫ್ರಾಂಕ್‌ಫರ್ಟ್, ಮಂಗಳೂರು, ಮತ್ತು ನವದೆಹಲಿಯಿಂದ ಬಂದಿದ್ದ ಮೂರು ವಿಮಾನಗಳನ್ನು ಬೆಂಗಳೂರು ಏರ್‌ಪೋರ್ಟ್‌ಗೆ ಕಳುಹಿಸಲಾಗಿದೆ. ಈ ಘಟನೆಯಿಂದ ವಿಮಾನ ಯಾತ್ರಿಕರಿಗೆ ತೊಂದರೆಯಾಗಿದೆ.
ಮೇಘಸ್ಫೋಟ ಎಂದರೇನು?
ಮೇಘಸ್ಫೋಟ ಎಂಬುದು ಒಂದು ನಿರ್ದಿಷ್ಟ ಪ್ರದೇಶದಲ್ಲಿ ತೀವ್ರವಾದ ಮಳೆಯನ್ನು ಸೂಚಿಸುವ ಪದವಾಗಿದೆ. 2030 ಚದರ ಕಿಲೋಮೀಟರ್‌ಗಿಂತ ಕಡಿಮೆ ಪ್ರದೇಶದಲ್ಲಿ ಒಂದು ಗಂಟೆಯಲ್ಲಿ 100 ಎಂಎಂಗಿಂತ ಹೆಚ್ಚು ಮಳೆ ಸುರಿದರೆ ಅದನ್ನು ಮೇಘಸ್ಫೋಟ ಎಂದು ಕರೆಯಲಾಗುತ್ತದೆ. ಚೆನ್ನೈನಲ್ಲಿ ಶನಿವಾರ ರಾತ್ರಿ ಈ ರೀತಿಯ ತೀವ್ರ ಮಳೆ ದಾಖಲಾಗಿದೆ.