ಅಯೋಧ್ಯೆ (ಜ.10): ಅಯೋಧ್ಯೆಯ ರಾಮ ಮಂದಿರದಲ್ಲಿ ಇಂದು ಬೆಳಗ್ಗೆ ಭದ್ರತಾ ಲೋಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಮ ಮಂದಿರ ಆವರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ನಮಾಜ್ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಆತನನ್ನು ತಕ್ಷಣವೇ ಬಂಧಿಸಿದ್ದಾರೆ. ಈ ಘಟನೆ ದೇವಸ್ಥಾನ ಆವರಣದಲ್ಲಿ ಕೆಲಕಾಲ ಆತಂಕ ಮತ್ತು ಉದ್ವಿಗ್ನತೆಯ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು.
ಬಂಧಿತನನ್ನು ಅಹ್ಮದ್ ಶೇಖ್ ಎಂದು ಗುರುತಿಸಲಾಗಿದ್ದು, ಆತ ಜಮ್ಮು ಮತ್ತು ಕಾಶ್ಮೀರ ಮೂಲದ ನಿವಾಸಿ ಎನ್ನಲಾಗಿದೆ. ಆತ ರಾಮ ಮಂದಿರದ ಗೇಟ್ ಮೂಲಕ ಒಳನುಗ್ಗಿದ್ದು, ದೇವಾಲಯದ ದಕ್ಷಿಣ ಭಾಗದ ಗೋಡೆಯ ಬಳಿ ನಮಾಜ್ ಮಾಡಲು ಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಬಿದ್ದಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಸಿಆರ್‌ಪಿಎಫ್ ಹಾಗೂ ಸ್ಥಳೀಯ ಭದ್ರತಾ ಪಡೆಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿವೆ.
ಭದ್ರತಾ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ವಹಿಸಿದ್ದು, ಸಂಪೂರ್ಣ ರಾಮ ಮಂದಿರ ಆವರಣವನ್ನು ಕೆಲಕಾಲ ತಪಾಸಣೆಗೆ ಒಳಪಡಿಸಲಾಯಿತು. ಈ ಘಟನೆಯಲ್ಲಿ ಯಾವುದೇ ಹಿಂಸಾತ್ಮಕ ಘಟನೆ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆರೋಪಿಯ ಬಳಿಯಿಂದ ಅಲ್ಪ ಪ್ರಮಾಣದ ಒಣ ಹಣ್ಣುಗಳು, 2700 ರೂ. ನಗದು ಹಾಗೂ ಕೆಲವು ಫೋನ್ ಸಂಖ್ಯೆಗಳಿರುವ ಡೈರಿ ವಶಪಡಿಸಿಕೊಳ್ಳಲಾಗಿದೆ. ಆದರೆ ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಆರೋಪಿಯ ಹಿನ್ನೆಲೆ ಕುರಿತು ಹೆಚ್ಚಿನ ಮಾಹಿತಿಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸಂಪರ್ಕ ಸಾಧಿಸಲಾಗಿದ್ದು, ಆತನ ಪೂರ್ವ ಚಟುವಟಿಕೆಗಳು, ಸಂಚಾರ ವಿವರಗಳು ಹಾಗೂ ಸಂಪರ್ಕ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ. ಈ ಘಟನೆಯ ಕುರಿತು ಅಯೋಧ್ಯಾ ಜಿಲ್ಲಾಡಳಿತ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ರಾಮ ಮಂದಿರ ಟ್ರಸ್ಟ್ ಕೂಡ ಇದುವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ.
ಇದೇ ವೇಳೆ, ಅಯೋಧ್ಯಾ ಜಿಲ್ಲಾಡಳಿತವು ರಾಮ ಮಂದಿರದಿಂದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರಿ ಆಹಾರದ ವಿತರಣೆ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಪಂಚಕೋಶಿ ಪರಿಕ್ರಮಾ ಪ್ರದೇಶ ಸೇರಿದಂತೆ ಅಯೋಧ್ಯಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನ್‌ಲೈನ್ ಆಹಾರ ವಿತರಣಾ ಕಂಪನಿಗಳ ಮೂಲಕ ಮಾಂಸಾಹಾರಿ ಆಹಾರ ಪೂರೈಕೆ ನಡೆಯುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
ಅಯೋಧ್ಯೆಯಲ್ಲಿನ ಹೋಟೆಲ್‌ಗಳು ಮತ್ತು ಹೋಂಸ್ಟೇಗಳಿಗೆ ಸಹ ಎಚ್ಚರಿಕೆ ನೀಡಲಾಗಿದ್ದು, ಅತಿಥಿಗಳಿಗೆ ಮಾಂಸಾಹಾರಿ ಆಹಾರ ಮತ್ತು ಮದ್ಯ ವಿತರಿಸಬಾರದು ಎಂದು ಸೂಚಿಸಲಾಗಿದೆ. ಸಹಾಯಕ ಆಹಾರ ಆಯುಕ್ತ ಮಾಣಿಕ್ ಚಂದ್ರ ಸಿಂಗ್ ಮಾತನಾಡಿ, ಈಗಿರುವ ನಿಷೇಧದ ಹೊರತಾಗಿಯೂ ಆನ್‌ಲೈನ್ ಆರ್ಡರ್ ಮೂಲಕ ಮಾಂಸಾಹಾರಿ ಆಹಾರ ಪೂರೈಕೆ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ. ಹೀಗಾಗಿ, ಅಂತಹ ಆನ್‌ಲೈನ್ ವಿತರಣೆಯನ್ನೂ ತಕ್ಷಣದಿಂದಲೇ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.





