ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Ayodhya Ram Mandir) ಕಳೆದ ಐದು ವರ್ಷಗಳಲ್ಲಿ ಭಾರತ ಸರ್ಕಾರಕ್ಕೆ ಸುಮಾರು 400 ಕೋಟಿ ರೂಪಾಯಿ ತೆರಿಗೆ ಪಾವತಿಸಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರೈ (Champath Rai) ಭಾನುವಾರ ತಿಳಿಸಿದ್ದಾರೆ.
ಈ ಮೊತ್ತವನ್ನು ಫೆಬ್ರವರಿ 5, 2020 ರಿಂದ ಫೆಬ್ರವರಿ 5, 2025 ರ ಅವಧಿಯಲ್ಲಿ ಪಾವತಿಸಲಾಗಿದೆ. ಒಟ್ಟು ಮೊತ್ತದಲ್ಲಿ 270 ಕೋಟಿ ರೂಪಾಯಿಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರೂಪದಲ್ಲಿ ಪಾವತಿಸಲಾಗಿದ್ದು, 130 ಕೋಟಿ ರೂಪಾಯಿಗಳನ್ನು ಇತರ ತೆರಿಗೆ ವರ್ಗಗಳ ಅಡಿಯಲ್ಲಿ ಪಾವತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ
ಅಯೋಧ್ಯೆಯ ರಾಮ ಮಂದಿರ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳಿಗೂ ಕಾರಣವಾಗಿದೆ. ಮಹಾ ಕುಂಭಮೇಳದ ಸಮಯದಲ್ಲಿ 1.26 ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದರೆ, ಕಳೆದ ವರ್ಷ 16 ಕೋಟಿ ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡಿ, 5 ಕೋಟಿ ಭಕ್ತರು ರಾಮಮಂದಿರದಲ್ಲಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ.
ಕಳೆದ ವರ್ಷ ಅಯೋಧ್ಯೆಯಲ್ಲಿ 16 ಕೋಟಿ ಪ್ರವಾಸಿಗರು ದಾಖಲಾಗಿದ್ದು, 5 ಕೋಟಿ ಜನರು ರಾಮ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. 2019 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆಗಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು 2020 ರಲ್ಲಿ ರಚಿಸಲಾಯಿತು, ಇದು ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತ್ತು.
ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ
ಜನವರಿ 22, 2024 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾರತದಾದ್ಯಂತದ ಧಾರ್ಮಿಕ ಮುಖಂಡರು, ರಾಜಕೀಯ ವ್ಯಕ್ತಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.
ರಾಮ ಮಂದಿರ ನಿರ್ಮಾಣದಿಂದ ಅಯೋಧ್ಯೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕೇಂದ್ರವಾಗಿ ಬೆಳೆದಿದೆ. ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುವುದರಿಂದ ಸ್ಥಳೀಯ ವ್ಯಾಪಾರ, ಹೋಟೆಲ್ ಉದ್ಯಮ ಹಾಗೂ ಪ್ರವಾಸೋದ್ಯಮ ವಲಯವೂ ಬೆಳೆಯುತ್ತಿದೆ.
ಸಿಎಜಿ ಆಡಿಟ್ ಮತ್ತು ಹಣಕಾಸು ನಿರ್ವಹಣೆ
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಣಕಾಸು ದಾಖಲೆಯನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ನಿಯಮಿತವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಚಂಪತ್ ರೈ ತಿಳಿಸಿದ್ದಾರೆ.





