ಇಟಾನಗರ: ಈಶಾನ್ಯದ ಸುಂದರ ರಾಜ್ಯ ಅರುಣಾಚಲ ಪ್ರದೇಶವು ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ರಾಜ್ಯದ ಪ್ರಮುಖ ಜಿಲ್ಲೆಗಳಾದ ಲೋಯರ್ ಸುಬನ್ಸಿರಿ ಮತ್ತು ಕೇಯಿ ಪನ್ನೋರ್ನಲ್ಲಿ ಸಂಭವಿಸಿದ ದಿಢೀರ್ ಪ್ರವಾಹವು ಸಾಮಾನ್ಯ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಇಡೀ ಹಳ್ಳಿಗಳೇ ಜಲಾವೃತಗೊಂಡಿದ್ದು, ನೂರಾರು ಎಕರೆ ಕೃಷಿ ಭೂಮಿ ನೀರಿನ ಪಾಲಾಗಿದೆ. ಪರ್ವತಮಯ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತಗಳು ಪ್ರಮುಖ ರಸ್ತೆಗಳು, ಸೇತುವೆಗಳು ಮತ್ತು ಸಂಪರ್ಕ ಮಾರ್ಗಗಳನ್ನು ಕೊಚ್ಚಿ ಹೋಗಿದೆ.
ಬುಧವಾರ ಮುಂಜಾನೆ ಸುಮಾರು 6 ಗಂಟೆಗೆ ಸಂಭವಿಸಿದ ಮೇಘಸ್ಫೋಟದ ತೀವ್ರತೆಯಿಂದಾಗಿ ಸ್ಥಳೀಯ ನದಿ ಮತ್ತು ಹಳ್ಳಗಳು ನಿಯಂತ್ರಣ ಮೀರಿ ಉಕ್ಕಿ ಹರಿದವು. ನೀರಿನ ಈ ಭೀಕರ ಪ್ರವಾಹದಿಂದ ಸೇತುವೆಯು ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ಕನಿಷ್ಠ 50 ಮನೆಗಳು ನೆಲಸಮವಾಗಿವೆ. ಅದೃಷ್ಟವಶಾತ್ ಯಾವುದೇ ಸಾವು ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ನಾಪತ್ತೆಯಾದ ಐವರ ಪತ್ತೆಗಾಗಿ ರಕ್ಷಣಾ ತಂಡಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ.
ಮೂರು ಗಂಟೆಯಲ್ಲಿ ಸುರಿದ ಅಪಾರ ಮಳೆ
ಇಟಾನಗರದ ಪ್ರಾದೇಶಿಕ ಹವಾಮಾನ ಕೇಂದ್ರದ ವರದಿಯ ಪ್ರಕಾರ, ಲೋಯರ್ ಸುಬನ್ನಿರಿ ಜಿಲ್ಲೆಯ ಯಾಜಾಲಿ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆಯಿಂದ ಬುಧವಾರ ಮುಂಜಾನೆಯವರೆಗೆ ಬರೋಬ್ಬರಿ 72.8 ಮಿಲಿಮೀಟರ್ ಮಳೆ ದಾಖಲಾಗಿದೆ. ಈ ಮಳೆಯ ಬಹುಪಾಲು ಭಾಗವು ಬುಧವಾರ ಮುಂಜಾನೆ 6 ರಿಂದ 9 ಗಂಟೆಯ ನಡುವಿನ ಕೇವಲ ಮೂರು ಗಂಟೆಗಳ ಅವಧಿಯಲ್ಲಿಯೇ ಸುರಿದಿದೆ. ಮುಂಜಾನೆ 6 ರಿಂದ 7:30 ರ ನಡುವೆ ಮಳೆ ಹೆಚ್ಚಾಗಿದೆ. ಇದರಿಂದಾಗಿ ನದಿಯ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ನೀರಿನ ಹರಿವು ಅಪಾಯಕಾರಿ ಮಟ್ಟದಲ್ಲಿ ತೀವ್ರವಾಗಿ ಹೆಚ್ಚಾಗಿ, ನದಿಗಳ ಹರಿವು ಹೆಚ್ಚಾಯಿತು. ಈ ಹಠಾತ್ ಪ್ರವಾಹವು ಸಾಕಷ್ಟು ಹಾನಿ ತಂದಿವೆ.
ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು, ನದಿ ಪಾತ್ರದ ಇಕ್ಕೆಲಗಳಲ್ಲಿ ಮತ್ತು ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರು ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಅನಗತ್ಯ ಪ್ರಯಾಣದಿಂದ ದೂರವಿರಲು ಮತ್ತು ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಅಧಿಕಾರಿಗಳ ಸಂಪರ್ಕದಲ್ಲಿರಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ರಸ್ತೆಗಳು ಮುಚ್ಚಿಹೋಗಿರುವುದರಿಂದ ಮತ್ತು ಭೂಕುಸಿತಗಳಿಂದಾಗಿ ಕೆಲವು ಪ್ರದೇಶಗಳ ಸಂಪರ್ಕವು ಸಂಪೂರ್ಣವಾಗಿ ಕಡಿತಗೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ದೃಶ್ಯಗಳು
ಈ ಪ್ರವಾಹದ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನದಿಯ ರೌದ್ರರೂಪ, ಕೊಚ್ಚಿ ಹೋಗುವ ಸೇತುವೆಗಳು, ಮತ್ತು ಮನೆಗಳು ನೀರಿನಲ್ಲಿ ಕಣ್ಮರೆಯಾಗುತ್ತಿರುವ ದೃಶ್ಯಗಳು ಜನರನ್ನು ಬೆಚ್ಚಿಬೀಳಿಸಿವೆ. ಅರುಣಾಚಲ ಪ್ರದೇಶದ ಈ ಎರಡು ಜಿಲ್ಲೆಗಳಲ್ಲಿಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.





