ನವದೆಹಲಿ: ವಿಮಾನ ನಿಲ್ದಾಣದಲ್ಲಿ ಶಿಸ್ತು ಮತ್ತು ಶಾಂತಿಯಿಂದ ವರ್ತಿಸಬೇಕಾದ ವಿಮಾನದ ಪೈಲಟ್ ಒಬ್ಬರು, ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ಸಂಬಂಧ ಆರೋಪಿ ಪೈಲಟ್‌ನನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆ ತಕ್ಷಣ ಅಮಾನತುಗೊಳಿಸಿದೆ.
ಅಂಕಿತ್ ದಿವಾನ್ ಎಂಬ ಪ್ರಯಾಣಿಕರು ತಮ್ಮ ಪತ್ನಿ ಮತ್ತು ಕೇವಲ ನಾಲ್ಕು ತಿಂಗಳ ಮಗುವಿನೊಂದಿಗೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಪ್ರಯಾಣಕ್ಕೆ ಸಿದ್ಧರಾಗಿದ್ದರು. ಮಗು ಜೊತೆಗಿದ್ದ ಕಾರಣ ವಿಮಾನ ನಿಲ್ದಾಣದ ಸಿಬ್ಬಂದಿ ಅವರಿಗೆ ‘ಆದ್ಯತೆಯ ಸುರಕ್ಷತಾ ಲೇನ್’ (Priority Safety Lane) ಬಳಸುವಂತೆ ಸೂಚಿಸಿದ್ದರು. ಈ ಲೇನ್ ಸಾಮಾನ್ಯವಾಗಿ ವಿಮಾನದ ಸಿಬ್ಬಂದಿ ಮತ್ತು ವಿಶೇಷ ಸಹಾಯ ಬೇಕಾದ ಪ್ರಯಾಣಿಕರಿಗೆ (ವೃದ್ಧರು, ಮಕ್ಕಳುಳ್ಳವರು) ಮೀಸಲಾಗಿರುತ್ತದೆ.
ಅಂಕಿತ್ ದಿವಾನ್ ಅವರು ಸಾಲಿನಲ್ಲಿ ನಿಂತಿದ್ದಾಗ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕ್ಯಾಪ್ಟನ್ ವೀರೇಂದರ್ ಸೆಜ್ವಾಲ್ ಅವರು ನಿಯಮಗಳನ್ನು ಮೀರಿ ಸಾಲಿನ ಮುಂದೆ ಬರಲು ಪ್ರಯತ್ನಿಸಿದ್ದಾರೆ. ಇದನ್ನು ಅಂಕಿತ್ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೈಲಟ್ ವೀರೇಂದರ್ ಅತ್ಯಂತ ಅಸಭ್ಯ ಭಾಷೆ ಬಳಸಿ ಅಂಕಿತ್ ಅವರನ್ನು ನಿಂದಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಮಾತಿನ ಚಕಮಕಿ ವಿಕೋಪಕ್ಕೆ ಹೋದಾಗ, ಕ್ಯಾಪ್ಟನ್ ವೀರೇಂದರ್ ಅವರು ಪ್ರಯಾಣಿಕ ಅಂಕಿತ್ ಮೇಲೆ ದೈಹಿಕವಾಗಿ ದಾಳಿ ನಡೆಸಿದ್ದಾರೆ. ಪೈಲಟ್ ನಡೆಸಿದ ಹಲ್ಲೆಯಿಂದಾಗಿ ಅಂಕಿತ್ ಅವರ ಮುಖದ ಮೇಲೆ ತೀವ್ರ ರಕ್ತಸ್ರಾವವಾಗಿದೆ. ನಾಲ್ಕು ತಿಂಗಳ ಮಗುವನ್ನು ಎತ್ತಿಕೊಂಡಿದ್ದ ತಂದೆಯ ಮೇಲೆಯೇ ಪೈಲಟ್ ಈ ರೀತಿ ವರ್ತಿಸಿದ್ದರು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.
ಈ ಘಟನೆಯ ಕುರಿತು ಸ್ಪೈಸ್‌ಜೆಟ್ ಪ್ರಯಾಣಿಕರಾಗಿದ್ದ ಅಂಕಿತ್ ಅವರು ದೂರು ನೀಡಿದ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆ ಎಚ್ಚೆತ್ತುಕೊಂಡಿದೆ. ತನ್ನ ಉದ್ಯೋಗಿಯ ವರ್ತನೆಯನ್ನು ಖಂಡಿಸಿರುವ ಸಂಸ್ಥೆಯು, ತನಿಖೆ ಪೂರ್ಣಗೊಳ್ಳುವವರೆಗೆ ಪೈಲಟ್ ವೀರೇಂದರ್ ಸೆಜ್ವಾಲ್ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿದೆ. ನಾವು ನಮ್ಮ ಸಿಬ್ಬಂದಿಯಿಂದ ವೃತ್ತಿಪರ ವರ್ತನೆಯನ್ನು ನಿರೀಕ್ಷಿಸುತ್ತೇವೆ. ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.





