ನವದೆಹಲಿ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರಸ್ತೆ ಅಪಘಾತಗಳು, ಅದರಲ್ಲೂ ದ್ವಿಚಕ್ರ ವಾಹನ ಸವಾರರ ಸಾವಿನ ಪ್ರಮಾಣ ಸರ್ಕಾರದ ಗಮನ ಸೆಳೆದಿದೆ. ಈ ಹಿನ್ನೆಲೆ ರಸ್ತೆ ಸುರಕ್ಷತೆ ಬಲಪಡಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ಜನವರಿ 1ರ ನಂತರ ತಯಾರಾಗುವ ಎಲ್ಲ ದ್ವಿಚಕ್ರ ವಾಹನಗಳಿಗೆ ಆಯಂಟಿ–ಲಾಕ್ ಬ್ರೇಕಿಂಗ್ ಸಿಸ್ಟಂ (ABS) ಅನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ಈವರೆಗೆ 125 ಸಿಸಿ ಮತ್ತು ಅದಕ್ಕಿಂತ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಮಾತ್ರ ABS ಕಡ್ಡಾಯವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅಪಘಾತಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗ ಈ ನಿಯಮವನ್ನು ಎಲ್ಲ ದ್ವಿಚಕ್ರ ವಾಹನಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಕಡಿಮೆ ಸಾಮರ್ಥ್ಯದ ಬೈಕ್ ಹಾಗೂ ಸ್ಕೂಟರ್‌ಗಳಲ್ಲೂ ಸುರಕ್ಷತಾ ವ್ಯವಸ್ಥೆ ಹೆಚ್ಚಾಗಲಿದೆ.
ನಿತಿನ್ ಗಡ್ಕರಿ ಅವರು ಮಾತನಾಡುತ್ತಾ, 2019ರಿಂದ 2023ರವರೆಗಿನ ಅವಧಿಯಲ್ಲಿ ದೇಶದಲ್ಲಿ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಸುಮಾರು 3.35 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ 2023ರ ಒಂದೇ ವರ್ಷದಲ್ಲಿ 77,539 ದ್ವಿಚಕ್ರ ವಾಹನ ಸವಾರರು ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ಅತ್ಯಂತ ಗಂಭೀರ ವಿಚಾರವಾಗಿದೆ.
2023ರಲ್ಲಿ ಅಪಘಾತದಲ್ಲಿ ಮೃತಪಟ್ಟವರಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಸವಾರರು ಹೆಲ್ಮೆಟ್ ಧರಿಸದೇ ಇದ್ದರು ಎಂಬುದು ಸರ್ಕಾರದ ವರದಿಯಿಂದ ತಿಳಿದುಬಂದಿದೆ. ದೇಶದಲ್ಲಿ ಸಂಭವಿಸುವ ಒಟ್ಟು ರಸ್ತೆ ಅಪಘಾತ ಸಾವುಗಳಲ್ಲಿ ದ್ವಿಚಕ್ರ ವಾಹನ ಸವಾರರ ಪಾಲು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2014ರಲ್ಲಿ ಈ ಪ್ರಮಾಣ ಶೇ.30ರಷ್ಟಿದ್ದರೆ, 2023ರ ವೇಳೆಗೆ ಅದು ಶೇ.45ಕ್ಕೆ ಏರಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಎರಡು ಪ್ರಮುಖ ಕ್ರಮಗಳನ್ನು ಜಾರಿಗೊಳಿಸಿದೆ. ಮೊದಲನೆಯದಾಗಿ, ಎಲ್ಲ ದ್ವಿಚಕ್ರ ವಾಹನಗಳಲ್ಲಿ ABS ಕಡ್ಡಾಯ ಮಾಡಲಾಗಿದೆ. ABS ವ್ಯವಸ್ಥೆ ತುರ್ತು ಬ್ರೇಕಿಂಗ್ ಸಂದರ್ಭದಲ್ಲೂ ಚಕ್ರಗಳು ಲಾಕ್ ಆಗದಂತೆ ತಡೆಯುತ್ತದೆ. ಇದರಿಂದ ವಾಹನ ಸ್ಕಿಡ್ ಆಗುವುದನ್ನು ತಡೆದು, ಚಾಲಕನಿಗೆ ವಾಹನದ ನಿಯಂತ್ರಣ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಎರಡನೆಯದಾಗಿ, ದ್ವಿಚಕ್ರ ವಾಹನ ಖರೀದಿ ವೇಳೆ ಗ್ರಾಹಕರಿಗೆ ಬಿಐಎಸ್ (BIS) ಪ್ರಮಾಣೀಕೃತ ಎರಡು ಹೆಲ್ಮೆಟ್‌ಗಳನ್ನು ನೀಡುವುದು ಕಡ್ಡಾಯ ಮಾಡಲಾಗಿದೆ. ಇದರಿಂದ ಸವಾರ ಮಾತ್ರವಲ್ಲದೆ ಹಿಂಬದಿ ಪ್ರಯಾಣಿಕನ ಸುರಕ್ಷತೆಯನ್ನೂ ಖಚಿತಪಡಿಸಿಕೊಳ್ಳುವ ಉದ್ದೇಶ ಸರ್ಕಾರಕ್ಕಿದೆ.
ಈ ನಿರ್ಧಾರದಿಂದ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾಗುವ ಸಾಧ್ಯತೆ ಇದ್ದರೂ, ಮಾನವ ಜೀವದ ಮೌಲ್ಯದ ಮುಂದೆ ಅದರ ಬೆಲೆ ಅತಿ ಕಡಿಮೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. “ರಸ್ತೆ ಅಪಘಾತಗಳಿಂದ ಸಾವು ಕಡಿಮೆ ಮಾಡುವುದು ಸರ್ಕಾರದ ಮೊದಲ ಆದ್ಯತೆ. ನಿಯಮಗಳನ್ನು ಕಠಿಣಗೊಳಿಸುವ ಜೊತೆಗೆ ಜನರಲ್ಲೂ ಸುರಕ್ಷತಾ ಜಾಗೃತಿ ಮೂಡಿಸಬೇಕಿದೆ” ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.





