ಬೆಂಗಳೂರು: ಬೆಂಗಳೂರು ನಗರದ ಕೊತ್ತನೂರಿನ ಕೆ.ನಾರಾಯಣಪುರದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸುನೀಲ್ (28) ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಮಾ.7ರಂದು ತಡರಾತ್ರಿ ನಡೆದಿದ್ದು, ಯಶವಂತಪುರ ನಿವಾಸಿಯಾಗಿದ್ದ ಸುನೀಲ್‌ಗೆ ಡ್ರಗ್ಸ್ ಸೇವನೆ ಹಾಗೂ ಹುಡುಗಿಯರ ಶೋಕಿಗೆ ಬಿದ್ದಿದ್ದನು. ಅವನ ಶೋಕಿಗೆ ಹಣ ಹೊಂದಿಸಲು ಮನೆಯಲ್ಲಿಯೇ ಚಿನ್ನ ಮತ್ತು ಹಣ ಕಳ್ಳತನ ಮಾಡುತ್ತಿದ್ದ. ಈ ಬಗ್ಗೆ ಕುಟುಂಬದವರು ಪ್ರಶ್ನಿಸಿದಾಗ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದನು.
ಈ ಘಟನೆ ನಂತರ ಮನೆ ಬಿಟ್ಟು ಕೊತ್ತನೂರು ಪ್ರದೇಶದ ಪಿಜಿಯಲ್ಲಿದ್ದ ಸುನೀಲ್, ಸ್ಥಳೀಯ ಗ್ಯಾರೇಜ್‌ನಲ್ಲಿ ಕೆಲಸಕ್ಕೂ ಸೇರಿದ್ದ. ಆದರೆ ಮಾ.7ರ ರಾತ್ರಿ ತನ್ನ ಮಾಲೀಕನಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸೇಜ್ ಮಾಡಿದ್ದನು. ಬಳಿಕ ಪಿಜಿ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ.





