ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್ ಭಾರೀ ಶಾಕ್ ನೀಡಿದೆ. ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ, ಅವರಿಗೆ ಜಾಮೀನು ನಿರಾಕರಿಸುವ ಮೂಲಕ ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠವು ಈ ಪ್ರಕರಣದ ಕುರಿತು ಜನವರಿ 9ರಂದು ವಾದ–ಪ್ರತಿವಾದಗಳನ್ನು ಆಲಿಸಿ ಆದೇಶವನ್ನು ಕಾಯ್ದಿರಿಸಿತ್ತು. ಇಂದು ತನ್ನ ತೀರ್ಪು ಪ್ರಕಟಿಸಿದ ನ್ಯಾಯಾಲಯ, ವಿನಯ್ ಕುಲಕರ್ಣಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಸೂಚಿಸಿದೆ.
ವಿನಯ್ ಕುಲಕರ್ಣಿ ಪರ ವಾದ ಏನಿತ್ತು?
ವಿನಯ್ ಕುಲಕರ್ಣಿ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದ್ದರು. ಜಾಮೀನು ಕೋರುವುದು ಅರ್ಜಿದಾರರ ಮೂಲಭೂತ ಹಕ್ಕಾಗಿದೆ. ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಜಾಮೀನು ಆದೇಶವನ್ನು ರದ್ದುಪಡಿಸಿದ್ದೇ ವಿನಾ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ನಿರ್ಬಂಧ ವಿಧಿಸಿಲ್ಲ ಎಂದು ಅವರು ಕೋರ್ಟ್ ಗಮನಕ್ಕೆ ತಂದಿದ್ದರು.
ಇನ್ನು, ಈ ಪ್ರಕರಣದಲ್ಲಿ 21 ಆರೋಪಿಗಳ ಪೈಕಿ 20 ಮಂದಿ ಈಗಾಗಲೇ ಜಾಮೀನಿನ ಮೇಲೆ ಹೊರಗಿದ್ದಾರೆ. ವಿನಯ್ ಕುಲಕರ್ಣಿ ವಿರುದ್ಧ ಸಾಕ್ಷಿಗಳ ವಿಚಾರಣೆ ಬಹುತೇಕ ಮುಗಿದಿದೆ. ಇಬ್ಬರು ತನಿಖಾಧಿಕಾರಿಗಳ ಹೇಳಿಕೆ ಮಾತ್ರ ದಾಖಲಾಗಬೇಕಿದೆ. ಇಂತಹ ಸಂದರ್ಭದಲ್ಲಿ ಅವರನ್ನು ಮುಂದುವರೆಸಿ ಜೈಲಿನಲ್ಲಿ ಇರಿಸುವ ಅಗತ್ಯವಿಲ್ಲ ಎಂದು ವಾದಿಸಿದರು.
ಪ್ರಾಸಿಕ್ಯೂಷನ್ ವಾದವೇನು?
ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ವಕೀಲರು, ವಿನಯ್ ಕುಲಕರ್ಣಿ ಪ್ರಭಾವಿ ರಾಜಕಾರಣಿಯಾಗಿರುವುದರಿಂದ ಸಾಕ್ಷಿಗಳ ಮೇಲೆ ಒತ್ತಡ ತರುವ ಸಾಧ್ಯತೆ ಇದೆ. ನ್ಯಾಯದಾನ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದ ಹಿನ್ನೆಲೆಯಲ್ಲೇ ಸುಪ್ರೀಂ ಕೋರ್ಟ್ ಹಿಂದಿನ ಜಾಮೀನನ್ನು ರದ್ದುಪಡಿಸಿತ್ತು. ಹೀಗಾಗಿ ಮತ್ತೆ ಜಾಮೀನು ನೀಡುವುದು ಸರಿಯಲ್ಲ ಎಂದು ವಾದಿಸಿದರು.
ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ, ಪ್ರಕರಣದ ಗಂಭೀರತೆ, ಆರೋಪಿಯ ಪ್ರಭಾವ ಹಾಗೂ ಸಾಕ್ಷಿಗಳ ಭದ್ರತೆ ದೃಷ್ಟಿಯಿಂದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ
2016ರ ಜೂನ್ 15ರಂದು ಧಾರವಾಡದ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು, ಸುದೀರ್ಘ ತನಿಖೆಯ ನಂತರ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ 15ನೇ ಆರೋಪಿಯಾಗಿ ಗುರುತಿಸಲಾಗಿದ್ದು, 2025ರ ಜೂನ್ 13ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ.
ಹೈಕೋರ್ಟ್ ಆದೇಶದಿಂದ ವಿನಯ್ ಕುಲಕರ್ಣಿಗೆ ತಾತ್ಕಾಲಿಕವಾಗಿ ಜಾಮೀನು ದೊರಕದಂತಾಗಿದೆ. ಆದರೆ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಇರುವುದು ಮುಂದಿನ ಕಾನೂನು ಹೋರಾಟಕ್ಕೆ ದಾರಿ ತೆರೆದಿದೆ.





