ಬೆಂಗಳೂರಿನ ಹಿರಿಯ ಚೇತನ ಹಾಗೂ ನೃತ್ಯ ಮತ್ತು ಲಲಿತ ಕಲೆಗಳ ಮಹಾ ಪೋಷಕರಾಗಿದ್ದ ವಿಮಲಾ ರಂಗಾಚಾರ್ (96) ಅವರು ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರ ಶಿಕ್ಷಣ ಸಂಸ್ಥೆಯ ಸ್ಥಾಪಕ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾಗಿದ್ದ ಅವರು ಬೆಂಗಳೂರಿನಲ್ಲಿ ಹಲವಾರು ಲಲಿತ ಕಲಾ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಖ್ಯಾತಿ ಹೊಂದಿದ್ದರು . ಭಾರತೀಯ ಕರ ಕುಶಲ ಕಲೆಗಳ ಪ್ರವರ್ತಕರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಸ್ಥಾಪಿಸಿದ್ದ ಕ್ರಾಫ್ಟ್ ಕೌನ್ಸಿಲ್ ಅಫ್ ಇಂಡಿಯಾದ ಕರ್ನಾಟಕ ಘಟಕದ ಅಧ್ಯಕ್ಷರಾಗಿ ವಿಮಲಾ ರಂಗಾಚಾರ್ ಹಲವಾರು ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದರು . ಬೆಂಗಳೂರಿನಲ್ಲಿ ಕಥಕ್ ನೃತ್ಯವನ್ನು ಉತ್ತೇಜಿಸಲು ನಾಟ್ಯ ಇನ್ಸಿಟ್ಯೂಟ್ ಅಫ್ ಕಥಕ್ ನ್ನು ಸ್ಥಾಪಿಸಿದ್ದರು . ಮಲ್ಲೇಶ್ವರದ ಸೇವಾ ಸದನ ಕೂಡಾ ಇವರು ಕಟ್ಟಿ ಬೆಳೆಸಿದ ಸಂಸ್ಥೆ . ಬೆಂಗಳೂರಿನ ಎಡಿಎ ರಂಗಮಂದಿರದ ಗೌರವ ಕಾರ್ಯದರ್ಶಿಯಾಗಿ ಭಾರತೀಯ ವಿದ್ಯಾಭವನದ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
ವಿಮಲಾ ರಂಗಾಚಾರ್ ಅವರ ಪಾರ್ಥಿವ ಶರೀರವನ್ನು ಮಲ್ಲೇಶ್ವರಂನ ಅವರ ನಿವಾಸದಲ್ಲಿ ಫೆಬ್ರುವರಿ 27ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 .30 ರವರೆಗೆ ಸಾರ್ವಜನಿಕ ದರ್ಶನಕ್ಕಾಗಿ ಇಟ್ಟು ನಂತರ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ.