ವಿಜಯಪುರ: ಗಣೇಶ ಚತುರ್ಥಿಯ ಏಳನೇ ದಿನದಂದು ನಡೆದ ಅದ್ಧೂರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ವಿದ್ಯುತ್ ಹರಿದು ಯುವಕನೊರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ವಿಜಯಪುರ ನಗರದ ಗಾಂಧಿ ಚೌಕ್ ವೃತ್ತದ ಬಳಿ ನಡೆದಿದೆ.
ಮೃತ ಯುವಕನನ್ನು ಶುಭಂ ಸಂಕಪಾಲ (21) ಎಂದು ಗುರುತಿಸಲಾಗಿದೆ. ಇವರು ವಿಜಯಪುರದ ಡೋಬಲೆ ಗಲ್ಲಿ ನಿವಾಸಿಯಾಗಿದ್ದರು. ಗಾಯಗೊಂಡವರಾದ ಪ್ರಭಾಕರ ಜಂಗಲೆ (22) ಮತ್ತು ಲಖನ್ ಚವ್ಹಾಣ (28) ರವರಿಗೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಗಾಂಧಿ ಚೌಕ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ಬಸವರಾಜ ಯಲಿಗಾರ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಣೇಶ ಚತುರ್ಥಿಯ ಏಳನೇ ದಿನದಂದು ನಗರದಲ್ಲಿ ನೂರಾರು ಗಣಪತಿ ಮೂರ್ತಿಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮೂಲಕ ವಿಸರ್ಜನೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಗಣೇಶ ಮೂರ್ತಿಯನ್ನು ಸಾಗಿಸುವ ವೇಳೆ, ದೊಡ್ಡ ಗಾತ್ರದ ಮೂರ್ತಿಯಿಂದಾಗಿ ವಿದ್ಯುತ್ ತಂತಿಗಳು ಸ್ಪರ್ಶಿಸುವ ಸಾಧ್ಯತೆ ಇತ್ತು. ಇದನ್ನು ತಪ್ಪಿಸಲು ಶುಭಂ ಸಂಕಪಾಲ ಕೋಲಿನ ಸಹಾಯದಿಂದ ವಿದ್ಯುತ್ ತಂತಿಗಳನ್ನು ಮೇಲಕ್ಕೆ ಎತ್ತಲು ಮುಂದಾದರು. ಆದರೆ, ಈ ಸಂದರ್ಭದಲ್ಲಿ ವಿದ್ಯುತ್ ಪ್ರಸರಿಸಿ ಅವರು ಸ್ಥಳದಲ್ಲೇ ಮೃತಪಟ್ಟರು. ಇದೇ ವೇಳೆ ಪ್ರಭಾಕರ ಮತ್ತು ಲಖನ್ ಕೂಡ ವಿದ್ಯುತ್ ಶಾಕ್‌ಗೆ ಒಳಗಾಗಿ ಗಾಯಗೊಂಡರು.
ಈ ಘಟನೆಯಿಂದಾಗಿ ಮೆರವಣಿಗೆಯ ಸಂಭ್ರಮಕ್ಕೆ ತಡೆಯೊಡ್ಡಲಾಯಿತು. ಸ್ಥಳಕ್ಕೆ ತಕ್ಷಣ ಆಗಮಿಸಿದ ಪೊಲೀಸರು, ಗಾಂಧಿ ಚೌಕ್ ಸುತ್ತಮುತ್ತಲಿನ ಎಲ್ಲ ಗಣೇಶ ಮೂರ್ತಿಗಳನ್ನು ಶೀಘ್ರವಾಗಿ ವಿಸರ್ಜನೆಗೆ ಕಳುಹಿಸಿದರು. ಈ ಘಟನೆಯಿಂದ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.





