ಬೆಂಗಳೂರು: ವಿಧಾನಸಭೆ ಸಚಿವಾಲಯದ ವತಿಯಿಂದ ಪ್ರಪ್ರಥಮ ಬಾರಿಗೆ ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ವಿಧಾನಸೌಧದ ಆವರಣದಲ್ಲಿ ಗ್ರಂಥೋತ್ಸವ ಆಯೋಜಿಸಲಾಗಿದೆ.
ಈ ಪುಸ್ತಕ ಮೇಳದ ಸಿದ್ಧತಾ ಕಾರ್ಯವನ್ನು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಮೇಳ ಉದ್ಘಾಟನೆ ಮತ್ತು ಪ್ರಮುಖ ಕಾರ್ಯಕ್ರಮಗಳು
- ಫೆ.27: ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಸ್ತಕ ಮೇಳವನ್ನು ಉದ್ಘಾಟಿಸಲಿದ್ದಾರೆ.
- ಫೆ.28 ಮತ್ತು ಮಾ.2: ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
- ಮಾ.2: ಖ್ಯಾತ ಗಾಯಕ ಸಾಧುಕೋಕಿಲ ಅವರಿಂದ ಸಂಗೀತ ರಸಸಂಜೆ.
ಸಾಹಿತಿಗಳ ಸಂವಾದ, ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ
ಫೆ.28ರಿಂದ ಮಾ.2ರ ವರೆಗೆ ಪ್ರತಿದಿನ ಎರಡು ವೇದಿಕೆಗಳಲ್ಲಿ ವಿವಿಧ ವಿಚಾರ ಸಂಕಿರಣಗಳು, ಕವಿಗೋಷ್ಠಿಗಳು, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಸಂವಾದಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಾಸಕರಿಗಾಗಿ ವಿಶೇಷ ಯೋಜನೆ
- ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ, 2 ಲಕ್ಷ ರೂ.ಗಳ ಮಿತಿಯಲ್ಲಿ ಶಾಸಕರು ಸರ್ಕಾರಿ ಶಾಲಾ-ಕಾಲೇಜುಗಳಿಗೆ ಪುಸ್ತಕಗಳ ಖರೀದಿಗೆ ಅವಕಾಶ ಪಡೆಯಬಹುದು.
- 150 ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ, ವಿವಿಧ ಅಕಾಡೆಮಿಗಳು ಹಾಗೂ ಖಾಸಗಿ ಪ್ರಕಾಶನಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರಿಗೆ ಮುಕ್ತ ಪ್ರವೇಶ
ಫೆ.28 ರಿಂದ ಮಾ.2 ರವರೆಗೆ ನಡೆಯುವ ಎಲ್ಲ ಪರಿಷತ್ತು, ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.