ಬೆಂಗಳೂರು (ಜೂನ್19): ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದು ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಆತಂಕ ಸೃಷ್ಟಿಸಿದ್ದ ಸಮಸ್ಯೆಗೆ ಈಗ ಶಾಶ್ವತ ಪರಿಹಾರ ದೊರೆತಿದೆ. ಜಲಾಶಯದ ಒಟ್ಟು 33 ಕ್ರಸ್ಟ್ ಗೇಟ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಜೂನ್ 25ರಂದು ಅವುಗಳ ಅಧಿಕೃತ ಲೋಕಾರ್ಪಣೆ ನಡೆಯಲಿದೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಜಂಟಿಯಾಗಿ ಈ ನೂತನ ಗೇಟ್‌ಗಳನ್ನು ಉದ್ಘಾಟಿಸಲಿದ್ದಾರೆ. ಸುಮಾರು 51 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾದ ಈ ಮಹತ್ವದ ಕಾಮಗಾರಿ, ಜಲಾಶಯದ ಸುರಕ್ಷತೆ ಮತ್ತು ನೀರಾವರಿ ವ್ಯವಸ್ಥೆಗೆ ಹೊಸ ಭರವಸೆ ನೀಡಿದೆ. ಹೊಸದಾಗಿ ಅಳವಡಿಸಲಾದ ಕ್ರಸ್ಟ್ ಗೇಟ್‌ಗಳು ಮುಂದಿನ 55 ರಿಂದ 60 ವರ್ಷಗಳವರೆಗೆ ದೀರ್ಘಾವಧಿ ಬಾಳಿಕೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
2024ರ ಆಗಸ್ಟ್ 10ರಂದು ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿದ್ದ ಘಟನೆ ಬಳಿಕ, ತಾಂತ್ರಿಕ ತಜ್ಞರ ಸಮಿತಿ ಸಂಪೂರ್ಣ 33 ಗೇಟ್‌ಗಳನ್ನು ಬದಲಾಯಿಸುವ ಶಿಫಾರಸು ನೀಡಿತ್ತು. ಅದರಂತೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಂಡು ಕಾಮಗಾರಿ ಆರಂಭಿಸಿ, ಇದೀಗ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಜಲಾಶಯವು ಕರ್ನಾಟಕದ ನಾಲ್ಕು ಜಿಲ್ಲೆಗಳಷ್ಟೇ ಅಲ್ಲದೆ ಆಂಧ್ರ ಮತ್ತು ತೆಲಂಗಾಣದ ಲಕ್ಷಾಂತರ ರೈತರಿಗೆ ನೀರಾವರಿ ಮೂಲವಾಗಿರುವುದರಿಂದ ಈ ಯೋಜನೆಗೆ ಅತ್ಯಂತ ಮಹತ್ವ ನೀಡಲಾಗಿದೆ.
ಲೋಕಾರ್ಪಣೆಯ ಪೂರ್ವ ಸಿದ್ಧತೆಗಳ ಪರಿಶೀಲನೆಗಾಗಿ ಸಚಿವ ರಾಮಲಿಂಗಾರೆಡ್ಡಿ ಮುನಿರಾಬಾದ್ ಬಳಿಯ ಜಲಾಶಯಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ಜೊತೆಗೆ ಮುನಿರಾಬಾದ್ ಹೈಸ್ಕೂಲ್ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ವೇದಿಕೆ, ವಾಹನ ಸಂಚಾರ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಳ್ಳಲಾದ ಸುರಕ್ಷತಾ ಕ್ರಮಗಳನ್ನೂ ಅವರು ಪರಿಶೀಲಿಸಿದರು ಮತ್ತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಉದ್ಘಾಟನೆಯ ಜೊತೆಗೆ ಅಂತಾರಾಜ್ಯ ನೀರಿನ ಹಂಚಿಕೆ, ನೀರಾವರಿ ಯೋಜನೆಗಳು ಮತ್ತು ನದಿ ವಿವಾದಗಳ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ. ವಿಶೇಷವಾಗಿ ಮೇಕೆದಾಟು, ಮಹಾದಾಯಿ ಹಾಗೂ ನವಲಿ ಸಮಾನಾಂತರ ಜಲಾಶಯ ಯೋಜನೆಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಮುಂದಿನ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸರ್ಕಾರ ಅತ್ಯಂತ ವೇಗವಾಗಿ ಕಾಮಗಾರಿ ಪೂರ್ಣಗೊಳಿಸಿರುವುದು ಅದರ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳ ಟೀಕೆಗಳ ನಡುವೆಯೂ ಈ ಯೋಜನೆ ಯಶಸ್ವಿಯಾಗಿ ಮುಗಿದಿರುವುದು ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಜಲಾಶಯದ ಗೇಟ್ ಸಮಸ್ಯೆ ನೀರಿನ ನಿರ್ವಹಣೆ ಮತ್ತು ಸುರಕ್ಷತೆ ಕುರಿತು ಆತಂಕ ಉಂಟು ಆಗಿತ್ತು. ಆದರೆ ಇದೀಗ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ನವೀಕರಿಸಿ ಬದಲಾಯಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ.





