ದೆಹಲಿ ಜುಲೈ (13): ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮನೆ ಕೆಲಸದಾಕೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶಾಸಕ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ಹೈಕೋರ್ಟ್ ಈ ಹಿಂದೆ ಮನೆ ಕೆಲಸದಾಕೆಯ ಮೇಲಿನ ಹಲ್ಲೆಗೆ ಸಂಬಂಧಿಸಿದ ಆರೋಪವನ್ನು ರದ್ದುಗೊಳಿಸಿ, ಕೇವಲ ಲೈಂಗಿಕ ದೌರ್ಜನ್ಯ ಆರೋಪದ ತನಿಖೆಗೆ ಮಾತ್ರ ಅವಕಾಶ ನೀಡುವಂತೆ ಆದೇಶಿಸಿತ್ತು. ಅಲ್ಲದೆ, ಪ್ರಕರಣದಲ್ಲಿನ ಆರೋಪಗಳ ಸ್ವರೂಪದಲ್ಲಿಯೂ ಬದಲಾವಣೆ ಮಾಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಮೂರ್ತಿ ಪಾರ್ದಿವಾಲಾ ನೇತೃತ್ವದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಹೈಕೋರ್ಟ್ ಆದೇಶದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ.
“ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪವಿದೆ. ಎಚ್.ಡಿ. ರೇವಣ್ಣ ವಿರುದ್ಧ ಬೇರೆ ರೀತಿಯ ಆರೋಪಗಳಿವೆ. ಇಬ್ಬರ ವಿರುದ್ಧದ ಆರೋಪಗಳು ವಿಭಿನ್ನವಾಗಿರುವಾಗ ಹೈಕೋರ್ಟ್ ಆರೋಪಗಳ ಸ್ವರೂಪವನ್ನು ಹೇಗೆ ಬದಲಾಯಿಸಿತು?” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಎಚ್.ಡಿ. ರೇವಣ್ಣ ಅವರಿಗೆ ನೋಟಿಸ್ ಜಾರಿ ನೀಡಲಾಗಿದೆ.
ಇದೇ ವೇಳೆ, ಹೈಕೋರ್ಟ್ ತೀರ್ಪು ಬಂದ ಹಲವು ತಿಂಗಳ ಬಳಿಕ ಮೇಲ್ಮನವಿ ಸಲ್ಲಿಸಿದ ರಾಜ್ಯ ಸರ್ಕಾರದ ನಡೆಗೂ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 2025ರ ಡಿಸೆಂಬರ್‌ನಲ್ಲಿ ಹೈಕೋರ್ಟ್ ತೀರ್ಪು ನೀಡಿದ್ದರೂ, ಸರ್ಕಾರ ಇಷ್ಟು ವಿಳಂಬವಾಗಿ ಸುಪ್ರೀಂ ಕೋರ್ಟ್‌ಗೆ ಯಾಕೆ ಮೇಲ್ಮನವಿ ಸಲ್ಲಿಸಿತು ಎಂಬುದರ ಬಗ್ಗೆ ನ್ಯಾಯಪೀಠ ಪ್ರಶ್ನೆ ಎತ್ತಿದೆ.
ಪ್ರಕರಣದ ಹಿನ್ನೆಲೆ ನೋಡುವುದಾದರೆ, ಹೊಳೆನರಸೀಪುರದ ನಿವಾಸಿಯಾಗಿದ್ದ ಮನೆ ಕೆಲಸದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ, 2024ರ ಏಪ್ರಿಲ್ 28ರಂದು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಚ್.ಡಿ. ರೇವಣ್ಣ ಮತ್ತು ಅವರ ಪುತ್ರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತ್ಯೇಕ ಆರೋಪಗಳಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶದ ಕಾನೂನುಬದ್ಧತೆ ಹಾಗೂ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ವಿಸ್ತೃತವಾಗಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.





