ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ ನಡೆಸಿದ ಎಂಇಎಸ್ ನಾಯಕ ಶುಭಂ ಶೆಳಕೆ ಅವರನ್ನು ಪೊಲೀಸರು ಶನಿವಾರ ಚೇಸ್ ಮಾಡಿ ಬಂಧಿಸಿದ್ದಾರೆ. ಗೋವಾವೇಸ್ ಸರ್ಕಲ್ ಬಳಿ ನಡೆದ ಈ ಘಟನೆಯಲ್ಲಿ ಪೊಲೀಸರು ಪೀಲ್ಮಿ ರೀತಿಯಲ್ಲಿ ಶುಭಂ ಶೆಳಕೆ ಅವರ ವಾಹನವನ್ನು ಬೆನ್ನಟ್ಟಿ ಅವರನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ
ಕನ್ನಡ ರಾಜ್ಯೋತ್ಸವದಂದು ಎಂಇಎಸ್ ಕಾರ್ಯಕರ್ತರು ಬೆಳಗಾವಿ ಶಾಹಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಪ್ಪು ಬಾವುಟಗಳೊಂದಿಗೆ ಮೆರವಣಿಗೆ ನಡೆಸಿ, ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಪೊಲೀಸರು ಮೊದಲೇ ನಿಷೇಧಾಜ್ಞೆ ಹೇರಿದ್ದರೂ, ಎಂಇಎಸ್ ಮುಖಂಡ ಶುಭಂ ಶೆಳಕೆ ಅವರ ನೇತೃತ್ವದಲ್ಲಿ ಪುಂಡಾಟ ಮೆರವಣಿಗೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಶುಭಂ ಶೆಳಕೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಗಳು ಭಾಷಾ ಶಾಂತಿ ಭಂಗ, ನಿಷೇಧಾಜ್ಞೆ ಉಲ್ಲಂಘನೆ ಮತ್ತು ನಾಡದ್ರೋಹಿ ಚಟುವಟಿಕೆಗಳನ್ನು ಒಳಗೊಂಡಿವೆ.
ಘಟನೆಯ ದಿನ ಶುಭಂ ಶೆಳಕೆ ಅವರು ಮಾಳಮಾರುತಿ ಠಾಣೆಯ ಸಿಪಿಐ ಜೆ.ಎಂ. ಕಾಲೇಮಿರ್ಚೆ ಅವರೊಂದಿಗೆ ನಿಂತು ಸೆಲ್ಫಿ ತೆಗೆದುಕೊಂಡಿದ್ದರು. ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಪೊಲೀಸ್ ಅಧಿಕಾರಿಯೊಬ್ಬರು ನಾಡದ್ರೋಹಿ ಎನ್ನಲಾದ ವ್ಯಕ್ತಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಜನರಲ್ಲಿ ಅಸಮಾಧಾನ ಮೂಡಿಸಿತು. ಈ ವಿವಾದದ ನಂತರವೇ ಪೊಲೀಸ್ ಇಲಾಖೆ ತ್ವರಿತ ಕ್ರಮ ಕೈಗೊಂಡಿತು. ಸಿಪಿಐ ಕಾಲೇಮಿರ್ಚೆ ಅವರೇ ತಮ್ಮ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಶುಭಂ ಅವರನ್ನು ಬಂಧಿಸುವ ಕಾರ್ಯಾಚರಣೆಗೆ ಮುಂದಾಯಿತು.
ಬಂಧನದ ದೃಶ್ಯ ಫಿಲ್ಮ್ ಸ್ಟೈಲ್ನಲ್ಲಿತ್ತು. ಶುಭಂ ಶೆಳಕೆ ಅವರು ಬೆಳಗಾವಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಎಸಿಪಿ ಸಂತೋಷ್ ಸತ್ಯನಾಯಕ್ ಅವರ ನೇತೃತ್ವದಲ್ಲಿ ಮಾಳಮಾರುತಿ ಠಾಣೆಯ ಪೊಲೀಸ್ ತಂಡವು ಗೋವಾವೇಸ್ ಮಾರ್ಗದಲ್ಲಿ ಅವರನ್ನು ಬೆನ್ನಟ್ಟಿತು. ಹೈ ಸ್ಪೀಡ್ ಚೇಸ್ ನಂತರ ಗೋವಾವೇಸ್ ಸರ್ಕಲ್ ಬಳಿ ಶುಭಂ ಅವರ ವಾಹನವನ್ನು ತಡೆದು ಬಂಧಿಸಲಾಯಿತು.





