ಬೆಂಗಳೂರು, ಮಾ.11: ಬೆಂಗಳೂರಿನ ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್‌ನಲ್ಲಿ ಇಂದು ಬೆಳಿಗ್ಗೆ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ. ಶೇಷಾದ್ರಿಪುರಂನಿಂದ ಆನಂದರಾವ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿರುವ ರೈಲ್ವೆ ಅಂಡರ್‌ಪಾಸ್‌ನ ಕೆಳಭಾಗಕ್ಕೆ ಅಳವಡಿಸಲಾಗಿದ್ದ ದೊಡ್ಡ ತಗಡಿನ ಶೀಟ್ ಕಳಚಿಬಿದ್ದಿದೆ.
ಬೆಳಿಗ್ಗೆ ಸಂಚಾರ ಜೋರಾಗಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಅಂಡರ್‌ಪಾಸ್‌ನ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಬೃಹತ್ ತಗಡಿನ ಶೀಟ್ ಒಂದು ಸಂಚರಿಸುತ್ತಿದ್ದ ಬಸ್‌ಗೆ ತಗುಲಿದ ಪರಿಣಾಮ ಕೆಳಗೆ ಬಿದ್ದಿದೆ ಎಂದು ತಿಳಿದುಬಂದಿದೆ. ತಕ್ಷಣವೇ ನಡುರಸ್ತೆಯಲ್ಲೇ ಭಾರೀ ಗಾತ್ರದ ಶೀಟ್ ಬಿದ್ದಿದ್ದು, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಈ ತಗಡಿನ ಶೀಟ್‌ಗಳನ್ನು ಹಿಡಿದುಕೊಂಡಿದ್ದ ಕಬ್ಬಿಣದ ಕ್ಲಿಪ್‌ಗಳು ಬಹುಕಾಲದಿಂದ ತುಕ್ಕು ಹಿಡಿದಿದ್ದವು. ಇದರಿಂದಾಗಿ ಅವು ದುರ್ಬಲಗೊಂಡು ಕೊನೆಗೆ ಕಟ್ ಆಗಿವೆ. ಈ ವೇಳೆ ಅಂಡರ್‌ಪಾಸ್ ಮೂಲಕ ಸಾಗುತ್ತಿದ್ದ ಬಸ್ ಶೀಟ್‌ಗೆ ತಗುಲಿದ ಪರಿಣಾಮ ಶೀಟ್ ಸಂಪೂರ್ಣವಾಗಿ ಕಳಚಿಬಿದ್ದು ರಸ್ತೆಗೆ ಬಿದ್ದಿದೆ.
ಈ ರಸ್ತೆ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಪ್ರಮುಖ ಮಾರ್ಗವಾಗಿದ್ದು, ಬೆಳಗಿನ ವೇಳೆ ದ್ವಿಚಕ್ರ ವಾಹನಗಳು ಮತ್ತು ಪಾದಚಾರಿಗಳ ಸಂಚಾರವೂ ಹೆಚ್ಚಿರುತ್ತದೆ. ಅದೃಷ್ಟವಶಾತ್ ಶೀಟ್ ಕೆಳಗೆ ಬೀಳುವಾಗ ಅದರ ಕೆಳಗೆ ಯಾವುದೇ ದ್ವಿಚಕ್ರ ವಾಹನ ಅಥವಾ ಪಾದಚಾರಿಗಳು ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಶೇಷಾದ್ರಿಪುರಂ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ರಸ್ತೆ ಮಧ್ಯೆ ಬಿದ್ದಿದ್ದ ತಗಡಿನ ಶೀಟ್ ಅನ್ನು ತೆರವುಗೊಳಿಸುವ ಕೆಲಸ ತಕ್ಷಣ ಆರಂಭಿಸಲಾಯಿತು. ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ಕ್ರಮ ಕೈಗೊಂಡರು.,
ಇದೇ ವೇಳೆ ರೈಲ್ವೆ ಇಲಾಖೆಯ ಸಿಬ್ಬಂದಿಗೂ ಮಾಹಿತಿ ನೀಡಲಾಗಿದ್ದು, ಅವರು ಕೂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅಪಾಯದ ಹಂತದಲ್ಲಿದ್ದ ಉಳಿದ ತಗಡಿನ ಶೀಟ್‌ಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಆರಂಭಿಸಲಾಯಿತು. ಗ್ಯಾಸ್ ಕಟರ್ ಬಳಸಿ ಕಂಬಿಗಳನ್ನು ಕತ್ತರಿಸಿ, ಅಪಾಯಕಾರಿ ಸ್ಥಿತಿಯಲ್ಲಿದ್ದ ಶೀಟ್‌ಗಳನ್ನು ಸಿಬ್ಬಂದಿ ಎಚ್ಚರಿಕೆಯಿಂದ ಕೆಳಗಿಳಿಸಿದರು.
ನಂತರ ರಸ್ತೆ ಮೇಲೆ ಬಿದ್ದಿದ್ದ ಶೀಟ್ ಸೇರಿದಂತೆ ಉಳಿದ ಎಲ್ಲಾ ಅಪಾಯಕಾರಿ ಶೀಟ್‌ಗಳನ್ನು ತೆರವುಗೊಳಿಸುವ ಕಾರ್ಯವನ್ನು ಮುಂದುವರೆಸಲಾಯಿತು. ಈ ಕಾರ್ಯದ ವೇಳೆ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾದರೂ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.





