ಬೆಂಗಳೂರು ಸೆ. 09: ರಾಜ್ಯದ ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ಫಲಾನುಭವಿಗಳಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ನೀಡಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ. ಈ ಯೋಜನೆಗೆ ಒಟ್ಟು ರೂ. 237 ಕೋಟಿ ವೆಚ್ಚವಾಗಲಿದ್ದು, ರೂ. 100 ಕೋಟಿಯನ್ನು ಸರ್ಕಾರ ಭರಿಸಲಿದೆ. ಉಳಿದ ಮೊತ್ತವನ್ನು ಪಿಪಿಪಿ ಮಾದರಿಯಲ್ಲಿ ನಿರ್ವಹಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದು, ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಪ್ರಯಾಣಿಕರ ಓಡಾಟದ ನಿಖರ ಮಾಹಿತಿ ಲಭ್ಯವಾಗಲಿದೆ. ಯೋಜನೆಯ ಬಳಕೆ ಹಾಗೂ ಪ್ರಯಾಣದ ಮಾಹಿತಿಯನ್ನು ವ್ಯವಸ್ಥಿತವಾಗಿ ದಾಖಲಿಸಲು ಇದು ನೆರವಾಗಲಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
101 ತಾಲೂಕುಗಳಲ್ಲಿ ಬರ ಘೋಷಣೆ
ಇದೇ ವೇಳೆ ರಾಜ್ಯದ ಬರ ಪರಿಸ್ಥಿತಿ ಕುರಿತು ಮಾತನಾಡಿದ ಡಿಸಿಎಂ ಪರಮೇಶ್ವರ್, ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು. ಈ ಪೈಕಿ 42 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್‌ಗೆ ಅಧಿಕಾರಿಗಳು ತೆರಳಿದ್ದು, 24 ತಾಲೂಕುಗಳಲ್ಲಿ ಪರಿಶೀಲನೆ ಪೂರ್ಣಗೊಂಡಿದೆ. ಇನ್ನೂ 18 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಗ್ರೌಂಡ್ ಟ್ರೂಥಿಂಗ್ ಸಂಪೂರ್ಣಗೊಂಡ ಬಳಿಕ ಬರ ಘೋಷಣೆ ಮಾಡಲಾಗುವುದು. ನಂತರ ಅಗತ್ಯವಿರುವ ಇತರೆ ತಾಲೂಕುಗಳಲ್ಲೂ ಪರಿಶೀಲನೆ ನಡೆಸಲಾಗುವುದು. ಕೇಂದ್ರ ಸರ್ಕಾರದ ಬರ ಘೋಷಣೆ ಮಾರ್ಗಸೂಚಿಗಳ ಆಧಾರದ ಮೇಲೆ ಪ್ರಕ್ರಿಯೆ ನಡೆಯಲಿದ್ದು, ಇದರಲ್ಲಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸ್ಯಾಟಲೈಟ್ ಚಿತ್ರಗಳನ್ನೂ ಬಳಸಿಕೊಂಡು ಬೆಳೆ ಹಾಗೂ ಬರ ಪರಿಸ್ಥಿತಿಯನ್ನು ಅಂದಾಜಿಸಲಾಗುತ್ತಿದೆ. ಇನ್ನೆರಡು-ಮೂರು ದಿನಗಳಲ್ಲಿ ಮೊದಲ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರೂ. 18 ಸಾವಿರ ಕೋಟಿ ಬೆಳೆ ನಷ್ಟ
ಪ್ರಸ್ತುತ 101 ತಾಲೂಕುಗಳಲ್ಲಿ ಸುಮಾರು ರೂ. 18 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಕಳೆದ ಬಾರಿ ಸುಮಾರು ₹39 ಸಾವಿರ ಕೋಟಿ ನಷ್ಟವಾಗಿತ್ತು. ಈ ಬಾರಿ ಎನ್‌ಡಿಆರ್‌ಎಫ್ ನಿಯಮಗಳಡಿ ರೂ. 18 ಸಾವಿರ ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಕಳೆದ ಬಾರಿ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ರೂ. 3,500 ಕೋಟಿ ಪರಿಹಾರ ದೊರೆತಿತ್ತು. ಈ ಬಾರಿ ರಾಜ್ಯಕ್ಕೆ ಬರ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಡಿಸಿಎಂ ಅವರು ಹೇಳಿದ್ದಾರೆ.
ಮೊದಲ ಪ್ರಸ್ತಾವನೆ ಕಳುಹಿಸಿದ ಬಳಿಕ ಅಂತಿಮ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಹಾಗೂ ತಾವು ಸೇರಿ ಕೇಂದ್ರಕ್ಕೆ ಸಲ್ಲಿಸಲಿದ್ದಾರೆ. ಅಗತ್ಯಬಿದ್ದರೆ ಸರ್ವಪಕ್ಷ ನಿಯೋಗವನ್ನೂ ಕರೆದುಕೊಂಡು ಹೋಗಿ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ.





