ವಿಜಯಪುರ ಸೆ.09: ಸ್ಕೂಟಿ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯಪುರ ನಗರದ ಹೊರವಲಯದ ರಾಮನಗರ ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ನಿಂಗರಾಜು ಎಂದು ಗುರುತಿಸಲಾಗಿದೆ. ಅವರು ಮೂಲತಃ ಮಹಾರಾಷ್ಟ್ರದ ಜತ್ತ್ ನಿವಾಸಿಯಾಗಿದ್ದು, ಸದ್ಯ ವಿಜಯಪುರದ ಸಿಂದಗಿ ಬೈಪಾಸ್ ಪ್ರದೇಶದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ರಾಮನಗರದ ಬಳಿ ಸ್ಕೂಟಿಯಲ್ಲಿ ತೆರಳುತ್ತಿದ್ದ ನಿಂಗರಾಜು ಅವರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಲಾರಿ ಚಾಲಕನ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಯ ಸಂಪೂರ್ಣ ವಿವರಗಳನ್ನು ಕಲೆಹಾಕುತ್ತಿದ್ದಾರೆ.





