ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಆರನೇ ದಿನ ಸದನವು ಶೋಕ ಛಾಯೆಯಲ್ಲಿ ಮುಳುಗಿತು. ಭಾನುವಾರ ಇಹಲೋಕ ತ್ಯಜಿಸಿದ ಕಾಂಗ್ರೆಸ್ ಹಿರಿಯ ಶಾಸಕ, ದಾವಣಗೆರೆ ರಾಜಕೀಯದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ರಾಜಕೀಯ ನಾಯಕರಾದ ಸಿಎಂ ಸಿದ್ದರಾಮಯ್ಯ, ಆರ್. ಆಶೋಕ್, ಸಿ.ಎಸ್ ನಾಡಗೌಡ, ಕುಣಿಗಲ್ ರಂಗನಾಥ್, ಶಿವಲಿಂಗೇಗೌಡ ಹಲವು ಗಣ್ಯರು ಸಂತಾಪ ಸೂಚಿಸಿದರು.
ಸಭಾ ಕಾರ್ಯಾರಂಭಕ್ಕೂ ಮುನ್ನ, ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯನ್ನು ಸ್ಮರಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಶಾಮನೂರು ಅವರ ನಿಧನವು ರಾಜ್ಯ ರಾಜಕೀಯಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು. “ಶಾಮನೂರು ಶಿವಶಂಕರಪ್ಪ ಅವರು ಕೇವಲ ರಾಜಕಾರಣಿ ಮಾತ್ರವಲ್ಲ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಮಹಾನ್ ವ್ಯಕ್ತಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ,” ಎಂದು ಸಿಎಂ ಸಂತಾಪ ಸೂಚಿಸಿದರು.
ಶಾಮನೂರು ಶಿವಶಂಕರಪ್ಪ ಅವರು ಆರು ಬಾರಿ ಶಾಸಕರಾಗಿ ಹಾಗೂ ಒಮ್ಮೆ ಲೋಕಸಭಾ ಸದಸ್ಯರಾಗಿಯೂ ಆಯ್ಕೆಯಾಗಿ, ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದರು. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆ ದಾವಣಗೆರೆಯನ್ನು “ವಿದ್ಯಾಕಾಶಿ” ಎಂದು ಕರೆಸಿಕೊಳ್ಳುವಂತೆ ಮಾಡಿತ್ತು. ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕನಸಿನೊಂದಿಗೆ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.
“ದಾವಣಗೆರೆಗೆ ಒಂದು ಬ್ರಾಂಡ್ ನೇಮ್ ತಂದವರು ಶಾಮನೂರು ಅವರೇ. ಜಿಲ್ಲೆ ರಾಜ್ಯಮಟ್ಟದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಳ್ಳಲು ಅವರು ಕಾರಣಕರ್ತರು. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ವೈಯಕ್ತಿಕವಾಗಿ ಎಲ್ಲರೊಂದಿಗೆ ಸ್ನೇಹಪರವಾಗಿ ನಡೆದುಕೊಂಡವರು,” ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಮರಿಸಿದರು.
ಶಾಮನೂರು ಶಿವಶಂಕರಪ್ಪ ಅವರನ್ನು ಎಲ್ಲ ಪಕ್ಷಗಳ ನಾಯಕರೂ ‘ಅಜಾತಶತ್ರು’ ಎಂದು ಕರೆಯುತ್ತಿದ್ದರು. ವಿರೋಧ ಪಕ್ಷಗಳಲ್ಲಿಯೂ ಅವರಿಗೆ ಅಪಾರ ಗೌರವವಿತ್ತು.
ಸಿಎಂ ಅವರು ತಮ್ಮ ವೈಯಕ್ತಿಕ ನೆನಪುಗಳನ್ನು ಹಂಚಿಕೊಂಡು, “ನಾನು ದಾವಣಗೆರೆಗೆ ಹೋದಾಗಲೆಲ್ಲಾ ಅವರು ಆತ್ಮೀಯವಾಗಿ ಊಟಕ್ಕೆ ಕರೆಯುತ್ತಿದ್ದರು. ಅವರ 75ನೇ ಹುಟ್ಟುಹಬ್ಬವನ್ನು ಅವರ ಸ್ವಗ್ರಾಮದಲ್ಲೇ ಸರಳವಾಗಿ, ಭವ್ಯವಾಗಿ ಆಚರಿಸಿದ್ದನ್ನು ನಾನು ಮರೆಯಲಾರೆ,” ಎಂದು ಹೇಳಿದರು.
ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಾಮನೂರು ಅವರು, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎಂಬ ವಿಷಯವನ್ನೂ ಸಿಎಂ ಸದನದಲ್ಲಿ ತಿಳಿಸಿದರು. “ಅವರ ಅಗಲಿಕೆಯಿಂದ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಮತ್ತು ಹಿತೈಷಿಗಳು ದುಃಖದಲ್ಲಿದ್ದಾರೆ. ಅವರ ಕುಟುಂಬ, ಬಂಧು ಬಳಗ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ,” ಎಂದು ಸಿಎಂ ಪ್ರಾರ್ಥಿಸಿದರು.
“ನಾನು ಸ್ವತಃ ದಾವಣಗೆರೆಗೆ ತೆರಳಿ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ದರ್ಶನ ಪಡೆಯುತ್ತೇನೆ,” ಎಂದು ತಿಳಿಸಿದರು.





