ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಘಟನೆಗಳು ದಿನೆ ದಿನೇ ಹೆಚ್ಚುತ್ತಿದೆ. ಇಂತಹ ಘಟನೆಯೊಂದು ಇದೀಗ ಬೆಂಗಳೂರಿನ ಚಂದಾಪುರದ ಸೂರ್ಯಸಿಟಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ನಡೆದಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಎಸ್‌ಬಿಐ ಬ್ಯಾಂಕ್‌ನ ಮ್ಯಾನೇಜರ್ ಒಬ್ಬರು, ಗ್ರಾಹಕರೊಬ್ಬರು ಕನ್ನಡದಲ್ಲಿ ಸಂವಹನ ನಡೆಸಲು ಕೇಳಿದಾಗ, “ನಾನು ಕನ್ನಡ ಮಾತಾಡಲ್ಲ, ಇದು ಇಂಡಿಯಾ, ನಾನು ಹಿಂದಿಯನ್ನೇ ಮಾತಾಡುತ್ತೇನೆ” ಎಂದು ದುರಹಂಕಾರದಿಂದ ಉತ್ತರಿಸಿದ್ದಾರೆ. ಈ ಘಟನೆಯನ್ನು ಗ್ರಾಹಕರೊಬ್ಬರು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಕನ್ನಡಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡ ಭಾಷೆಯನ್ನು ತಿರಸ್ಕರಿಸಿ, “ನಾನೆಂದಿಗೂ ಕನ್ನಡ ಮಾತಾಡಲ್ಲ” ಎಂದು ಮ್ಯಾನೇಜರ್ ಹೇಳಿರುವುದು ಕೇವಲ ಭಾಷೆಯ ಅವಮಾನವಷ್ಟೇ ಅಲ್ಲ, ಕರ್ನಾಟಕದ ಸಾಂಸ್ಕೃತಿಕ ಗುರುತಿಗೆ ಧಕ್ಕೆಯಾಗಿದೆ. ಈ ಘಟನೆಯಿಂದಾಗಿ, ಸಾಮಾಜಿಕ ಜಾಲತಾಣಗಳಲ್ಲಿ #ಕನ್ನಡಕ್ಕೆಗೌರವ, #ಎಸ್‌ಬಿಐಅವಮಾನ ಎಂಬಂತಹ ಹ್ಯಾಷ್‌ಟ್ಯಾಗ್‌ಗಳೊಂದಿಗೆ ಟೀಕೆಗಳು ಹರಿದಾಡುತ್ತಿವೆ.
ಕನ್ನಡಿಗರು ಈ ಘಟನೆಯನ್ನು ಖಂಡಿಸಿ, ಎಸ್‌ಬಿಐ ಆಡಳಿತ ಮಂಡಳಿಯಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್‌ಗಳು ಮತ್ತು ಇತರ ಸಂಸ್ಥೆಗಳು ಕನ್ನಡ ಭಾಷೆಯನ್ನು ಗೌರವಿಸಬೇಕು ಎಂಬುದು ಕನ್ನಡಿಗರ ಆಗ್ರಹವಾಗಿದೆ. “ಕನ್ನಡ ಮಾತಾಡದಿದ್ದರೆ ಕರ್ನಾಟಕ ಬಿಟ್ಟು ತೊಲಗಿ” ಎಂಬ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.