ಬೆಂಗಳೂರು, ಆಗಸ್ಟ್ 12: ಸಂತೋಷ್ ಎಸ್ ಲಾಡ್ ಅವರಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಂಪುಟದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಖಾತೆ ನೀಡಲಾಗಿದ್ದು, ಮತ್ತೊಮ್ಮೆ ಕಾರ್ಮಿಕ ಇಲಾಖೆ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿಯೂ ಲಾಡ್ ಅವರು ಕಾರ್ಮಿಕ ಸಚಿವರಾಗಿ ಮೂರು ವರ್ಷ ಕೆಲಸ ಮಾಡಿದ್ದರು. ಇದೀಗ ಕಾರ್ಮಿಕ ಖಾತೆ ಜೊತೆಗೆ ಉದ್ಯೋಗ ಖಾತೆಯನ್ನೂ ಲಾಡ್ ಅವರಿಗೆ ನೀಡಲಾಗಿದೆ.
ನಾಡಿನ ಶ್ರಮಿಕರ ಸೇವೆ ಮಾಡುವುದು, ಅವರ ಅಭ್ಯುದಯಕ್ಕಾಗಿ ಕೆಲಸ ಮಾಡುವುದು ಪುಣ್ಯದ ಕೆಲಸ. ಈ ವಿಷಯದಲ್ಲಿ ನಾನು ನಿಜಕ್ಕೂ ಭಾಗ್ಯವಂತ ಎಂದು ಲಾಡ್ ಅವರು ಹೇಳಿದ್ದಾರೆ.
ಖಾತೆ ಹಂಚಿಕೆ ನಂತರ ಖುಷಿ ವ್ಯಕ್ತ ಪಡಿಸಿರುವ ಅವರು, ಈ ಹಿಂದಿನ ಸರ್ಕಾರದಲ್ಲಿ ನಾನು ಮಾಡಿದ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ಮತ್ತೊಮ್ಮೆ ಕಾರ್ಮಿಕ ಇಲಾಖೆಯ ಜೊತೆಗೆ ಉದ್ಯೋಗ ಇಲಾಖೆ ಜವಾಬ್ದಾರಿಯನ್ನು ವಹಿಸಿದ್ದಾರೆ. ಇದಕ್ಜಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಎಲ್ಲ ವರಿಷ್ಠರಿಗೆ ಆಭಾರಿ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ವಿಶೇಷವಾಗಿ ನಾಡಿನ ಕಾರ್ಮಿಕರ ಸೇವೆಯಲ್ಲಿ ನಾನು ತೋರಿದ ಬದ್ಧತೆಯನ್ನು ಗುರುತಿಸಿದ ನಮ್ಮ ಮೇರು ನಾಯಕ, ಲೋಕಸಭೆಯ ಮಾನ್ಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರಿಗೆ ನಾನು ಚಿರ ಋಣಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
‘ಶ್ರಮಮೇವ ಜಯತೇ’ ಎಂಬ ಘೋಷ ವಾಕ್ಯವನ್ನು ಅಕ್ಷರಶಃ ಪಾಲಿಸಲು ಮತ್ತೊಮ್ಮೆ ಅಣಿಯಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ನನ್ನ ಮೇಲಿರಲಿ ಎಂದು ಕೋರಿದ್ದಾರೆ.
ಸಂತೋಷ್ ಲಾಡ್ ಅವರು ಈ ಹಿಂದೆ ಕಾರ್ಮಿಕ ಸಚಿವರಾಗಿದ್ದಾಗ ಹಲವು ಕ್ರಾಂತಿಕಾರಿ ಕ್ರಮಗಳನ್ನು ಜಾರಿ ಮಾಡಿದ್ದರು. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಜಾರಿಗೆ ತಂದ ಯೋಜನೆಗಳು ಸಾಕಷ್ಟು ಪ್ರಶಂಸೆಗೊಳಗಾಗಿದ್ಸವು.
ಇದೀಗ ಮತ್ತೊಮ್ಮೆ ಲಾಡ್ ಅವರಿಗೆ ಕಾರ್ಮಿಕ ಇಲಾಖೆಯ ಜವಾಬ್ದಾರಿ ನೀಡಿದ್ದು, ಶ್ರಮಿಕರ ಕಲ್ಯಾಣಕ್ಕಾಗಿ ಇನ್ನೂ ಹೆಚ್ಚು ದುಡಿಯುವ ಅಭಿಲಾಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.





