ಬೆಂಗಳೂರು: ಲವ್ ಮಾಡುವಂತೆ ಮಹಿಳೆಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆ ಫ್ಯಾಷನ್ ಡಿಸೈನರ್ ಆಗಿದ್ದು, ಲವ್ ಮಾಡುವಂತೆ ಒತ್ತಾಯಿಸಿದ್ದು, ನಿರಾಕರಿಸಿದಾಗ ‘ನಿನ್ನನ್ನೂ.. ನಿನ್ನ ಇಬ್ಬರು ಮಕ್ಕಳನ್ನೂ ಕೊಂದೇ ಬಿಡ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿ ಸಂತೋಷ್ ರೆಡ್ಡಿಗೆ ಆತನ ಮಗಳು ಭಾವನ್ಯರೆಡ್ಡಿ ಮೂಲಕ ಸಂತ್ರಸ್ತೆಯ ಪರಿಚಯವಾಗಿದೆ. ಭಾವನ್ಯರೆಡ್ಡಿಯೊಂದಿಗೆ ಸಂತ್ರಸ್ತೆಯ ಸ್ನೇಹವಿತ್ತು. ಈ ಸಂಬಂಧವನ್ನು ಬಳಸಿಕೊಂಡ ಸಂತೋಷ್, ಆರಂಭದಲ್ಲಿ ಕುಟುಂಬದ ಸ್ನೇಹಿತನಂತೆ ವರ್ತಿಸಿದ. ಆತ ಸಂತ್ರಸ್ತೆಯೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದ. ತನ್ನ ಕಂಪನಿಯಲ್ಲಿ ಹೂಡಿಕೆ ಮಾಡುವ ಭರವಸೆ, ತನ್ನ ಮಗಳಿಗೆ ಸೂಕ್ತ ವರನನ್ನು ಆಯ್ಕೆ ಮಾಡುವಂತೆ ಕೇಳಿಕೊಳ್ಳುವ ಮೂಲಕ ಸಂತ್ರಸ್ತೆಯ ವಿಶ್ವಾಸವನ್ನು ಗಳಿಸಿದ.
ಕಾಲಕ್ರಮೇಣ ಸಂತೋಷ್ ರೆಡ್ಡಿಯ ವರ್ತನೆ ಬದಲಾಯಿತು. ತನ್ನ ಮಗಳು ತನ್ನನ್ನು ತೊರೆದು ಹೋಗಿದ್ದಾಳೆ ಎಂದು ಭಾವನಾತ್ಮಕವಾಗಿ ಅಳುತ್ತಿದ್ದ ಆತ, ಸಂತ್ರಸ್ತೆಯನ್ನು ಸಮಾಧಾನಕ್ಕಾಗಿ ಭೇಟಿಯಾಗಲು ಕರೆದ. ಒಂದು ದಿನ, ಸಮಾಧಾನ ಮಾಡುವ ಸಂದರ್ಭದಲ್ಲಿ “ನಾನು ನಿನ್ನನ್ನು ಪ್ರೀತಿಸುತ್ತೇನೆ, ನನ್ನ ಜೊತೆ ಪ್ರೀತಿಯಲ್ಲಿ ಇರಬೇಕು” ಎಂದು ಆತ ಒತ್ತಾಯಿಸಿದ. ಆದರೆ ಸಂತ್ರಸ್ತೆ ಆತನ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ.
ಸಂತೋಷ್ ರೆಡ್ಡಿ ತನ್ನ ಒತ್ತಾಯವನ್ನು ಮುಂದುವರೆಸಿದ. ಆಕೆ ಒಪ್ಪದಿದ್ದರೆ, ತನ್ನ ಇಬ್ಬರು ಮಕ್ಕಳನ್ನು ಮತ್ತು ಆಕೆಯನ್ನು ಕೊಂದುಬಿಡುವುದಾಗಿ ಭಯಾನಕ ಬೆದರಿಕೆ ಹಾಕಿದ. ಈ ಬೆದರಿಕೆಗಳಿಂದ ಆತಂಕಗೊಂಡ ಸಂತ್ರಸ್ತೆ, ತಕ್ಷಣವೇ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ತೆರಳಿ, ಸಂತೋಷ್ ರೆಡ್ಡಿಯ ವಿರುದ್ಧ ದೂರು ದಾಖಲಿಸಿದರು.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂತೋಷ್ ರೆಡ್ಡಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಆತನ ವಿರುದ್ಧ ಕಾನೂನು ಕ್ರಮಕ್ಕೆ ತನಿಖೆ ನಡೆಯುತ್ತಿದೆ.





