ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನವಾದ ಶುಕ್ರವಾರ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಬಹುಮತದ ಬೆಂಬಲದೊಂದಿಗೆ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಧ್ವನಿಮತದ ಮೂಲಕ ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಪರವಾಗಿ 38 ಮತಗಳು ಚಲಾವಣೆಯಾಗಿದ್ದು, ಎನ್ಡಿಎ ಅಭ್ಯರ್ಥಿ ಬಿಜೆಪಿಯ ಪಿ.ಎಚ್. ಪೂಜಾರ್ ಪರವಾಗಿ 30 ಮತಗಳು ದಾಖಲಾಗಿವೆ.
ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ವಿಧಾನ ಪರಿಷತ್ತಿನ ಒಟ್ಟು 75 ಸದಸ್ಯರ ಪೈಕಿ ಕಾಂಗ್ರೆಸ್ಗೆ 38, ಬಿಜೆಪಿಗೆ 25, ಜೆಡಿಎಸ್ಗೆ 6 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಐದು ಸ್ಥಾನಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಸಂಖ್ಯಾಬಲವನ್ನು ಸಮರ್ಥವಾಗಿ ಬಳಸಿಕೊಂಡು ಸಭಾಪತಿ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಹಂಗಾಮಿ ಸಭಾಪತಿ ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಭಾಪತಿ ಸ್ಥಾನಕ್ಕೆ ಒಟ್ಟು ಏಳು ಪ್ರಸ್ತಾವಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಐದು ಪ್ರಸ್ತಾವಗಳು ಸಲೀಂ ಅಹ್ಮದ್ ಪರವಾಗಿದ್ದರಿಂದ ಧ್ವನಿಮತಕ್ಕೆ ಹಾಕಲಾಯಿತು. ಬಹುಮತದ ಬೆಂಬಲ ಪಡೆದ ಸಲೀಂ ಅಹ್ಮದ್ ಅವರನ್ನು ಅಧಿಕೃತವಾಗಿ ವಿಧಾನ ಪರಿಷತ್ ಸಭಾಪತಿಯಾಗಿ ಘೋಷಿಸಲಾಯಿತು.
1964ರ ಜನವರಿ 1ರಂದು ಜನಿಸಿದ ಸಲೀಂ ಅಹ್ಮದ್ ಅವರು ಎಂ.ಎ ಪದವೀಧರರಾಗಿದ್ದು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ತಂದೆ ಅಝೀಝ್ ಅಹ್ಮದ್ ಅವರ ಪ್ರೇರಣೆಯಲ್ಲಿ ವಿದ್ಯಾರ್ಥಿ ಚಳವಳಿಯಿಂದಲೇ ರಾಜಕೀಯ ಪ್ರವೇಶಿಸಿದ ಅವರು, 1982–86ರ ಅವಧಿಯಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಗುರುತಿಸಿಕೊಂಡರು.
ಎನ್ಎಸ್ಯುಐನಲ್ಲಿ ಬ್ಲಾಕ್ ಅಧ್ಯಕ್ಷ, ಬೆಂಗಳೂರು ನಗರ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, 1987ರಿಂದ 1993ರವರೆಗೆ ರಾಜ್ಯ ಎನ್ಎಸ್ಯುಐ ಅಧ್ಯಕ್ಷರಾಗಿದ್ದರು. ಬಳಿಕ 1993–97ರ ಅವಧಿಯಲ್ಲಿ ರಾಷ್ಟ್ರೀಯ ಎನ್ಎಸ್ಯುಐ ಅಧ್ಯಕ್ಷರಾಗಿ ಹಾಗೂ ಭಾರತೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದರು.
2002ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯರಾದ ಸಲೀಂ ಅಹ್ಮದ್, 2018–20ರಲ್ಲಿ ತೆಲಂಗಾಣ ಉಸ್ತುವಾರಿಯಾಗಿ ಎಐಸಿಸಿ ಕಾರ್ಯದರ್ಶಿಯಾಗಿದ್ದರು. ನಂತರ 2020ರಿಂದ 2024ರವರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದರು.
1996ರಲ್ಲಿ ಮೊದಲ ಬಾರಿಗೆ ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅವರು, 2000–07ರ ಅವಧಿಯಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದರು. 2002ರಲ್ಲಿ ಮರುಆಯ್ಕೆಯಾಗಿದ್ದ ಅವರು, 2017–18ರಲ್ಲಿ ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದರು. 2022ರಲ್ಲಿ ಹುಬ್ಬಳ್ಳಿ–ಧಾರವಾಡ, ಹಾವೇರಿ ಹಾಗೂ ಗದಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೂರನೇ ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದು, 2023ರಲ್ಲಿ ಮತ್ತೆ ಸರ್ಕಾರದ ಮುಖ್ಯ ಸಚೇತಕರಾಗಿ ನೇಮಕಗೊಂಡಿದ್ದರು.
ಸಲೀಂ ಅಹ್ಮದ್ ಅವರು 2012ರಿಂದ 2014ರವರೆಗೆ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಸಂಘಟನೆಯ (NYKS) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಾಸ್ಕೋ, ದಕ್ಷಿಣ ಕೊರಿಯಾ ಹಾಗೂ ಅಮೆರಿಕದಲ್ಲಿ ನಡೆದ ಅಂತರರಾಷ್ಟ್ರೀಯ ಯುವ ಸಮ್ಮೇಳನಗಳು ಮತ್ತು ರಾಜಕೀಯ ಅಧ್ಯಯನ ನಿಯೋಗಗಳಲ್ಲಿ ಭಾರತೀಯ ಪ್ರತಿನಿಧಿಯಾಗಿ ಭಾಗವಹಿಸಿರುವ ಅನುಭವವೂ ಅವರ ರಾಜಕೀಯ ಜೀವನಕ್ಕೆ ವಿಶೇಷ ಮೆರುಗು ತಂದಿದೆ.
ವಿದ್ಯಾರ್ಥಿ ನಾಯಕತ್ವದಿಂದ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯವರೆಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಸಲೀಂ ಅಹ್ಮದ್ ಇದೀಗ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.




