ನವದೆಹಲಿ: ಭಾರತೀಯ ರೈಲ್ವೆ ಕ್ಷೇತ್ರದ ಅಭಿವೃದ್ಧಿಗಾಗಿ ರೇಲ್ವೆ ತಿದ್ದುಪಡಿ ಮಸೂದೆ 2024 ಅನ್ನು ಬೆಂಬಲಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು; ಕಳೆದ ಹತ್ತು ವರ್ಷಗಳ ಅವಧಿಯಲಿ ನರೇಂದ್ರ ಮೋದಿ ಅವರ ಸರಕಾರ ರೇಲ್ವೆ ವಲಯದಲ್ಲಿ ಕ್ರಾಂತಿಕಾರಕ ಅಭಿವೃದ್ಧಿಯನ್ನು ಮಾಡಿದೆ ಎಂದು ಶ್ಲಾಘಿಸಿದರು.
ರಾಜ್ಯಸಭೆಯಲ್ಲಿ ಸೋಮವಾರ ಈ ಬಗ್ಗೆಮಾತನಾಡಿದ ಮಾಜಿ ಪ್ರಧಾನಿಗಳು; ಕರ್ನಾಟಕದಲ್ಲಿ ಮೈಸೂರು ಮಹಾರಾಜರ ಆಳ್ವಿಕೆ ವೇಳೆ ಮೈಸೂರು – ಹರಿಹರವರೆಗೂ ಮೀಟರ್ ಗೇಜ್ ರೇಲು ಮಾರ್ಗ ನಿರ್ಮಿಸಿದ್ದನ್ನು ಸ್ಮರಿಸಿದರಲ್ಲದೆ, ಆಗಿನ ತಮ್ಮ ರೇಲು ಪ್ರಯಾಣದ ಅನುಭವವನ್ನು ನೆನೆದರು.
ಈಗ ಬಾಂಬೆ- ಚೆನ್ನೈ ರೇಲು ಮಾರ್ಗವೂ ಹರಿಹರ-ದಾವಣಗೆರೆ-ಶೃಂಗೇರಿ-ಬೇಲೂರು ಮೂಲಕ ಚನ್ನೈಗೆ ಹಾದು ಹೋಗುತ್ತಿದ್ದು ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ನಿರೀಕ್ಷೆಗೂ ಮೀರಿ ರೈಲ್ವೆ ಜಾಲ ಮತ್ತು ಮಾರ್ಗಗಳು ಸಾಕಷ್ಟು ಪ್ರಗತಿ ಸಾಧಿಸಿದೆ. ಈ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ನಾನು ರೇಲ್ವೆ ಸಚಿವರನ್ನು ಅಭಿನಂದಿಸಿದರೆ ಕೆಲವರು ತಪ್ಪು ತಿಳಿದುಕೊಳ್ಳಬಾರದು. ನಾನು ಪ್ರಧಾನಿ ಆಗಿದ್ದಾಗ ಈ ಕ್ಷೇತ್ರದಲ್ಲಿ ಏನು ಮಾಡಿದ್ದೇನೆ, ನರೇಂದ್ರ ಮೋದಿ ಅವರು ಹತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿದೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ರೇಲ್ವೆ ತಿದ್ದುಪಡಿ ಮಸೂದೆಯು ಅತ್ಯಂತ ಮಹತ್ವದ ಮಸೂದೆ. ಇದಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದ ಮಾಜಿ ಪ್ರಧಾನಿಗಳು; ಸದನದಲ್ಲಿಯೇ ಉಪಸ್ಥಿತರಿದ್ದ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರಲ್ಲದೆ, ನೀವು ಅತ್ಯಂತ ಪ್ರಾಮಾಣಿಕ ರೇಲ್ವೆ ಸಚಿವರು ಎಂದರು.