ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ವಿಚಾರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮೂಲಕ ಮೊಸರಿನ ದರವನ್ನು ಅತಿರೇಕದ ಮಟ್ಟಕ್ಕೆ ಏರಿಸಲಾಗಿದೆ. ತನ್ನ ಆರ್ಥಿಕ ದುರಾಡಳಿತ ಮತ್ತು ಖಾಲಿಯಾಗಿರುವ ಸರ್ಕಾರಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಹಾಕುತ್ತಿದೆ ಎಂದು ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ನಂದಿನಿ ಮೊಸರಿನ ಹೊಸ ದರದ ಬಗ್ಗೆ ಮಾತನಾಡಿರುವ ಅವರು, ಒಂದು ಲೀಟರ್ ಮೊಸರಿನ ಬೆಲೆಯನ್ನು 54 ರೂ.ನಿಂದ 68 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ಒಂದೇ ಬಾರಿಗೆ 14 ರೂ. ಏರಿಕೆ ಮಾಡಲಾಗಿದ್ದು, ಶೇಕಡಾ 25.93ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಅದೇ ರೀತಿ ಅರ್ಧ ಲೀಟರ್ ಮೊಸರಿನ ಬೆಲೆಯನ್ನು 28 ರೂ.ನಿಂದ 34 ರೂ.ಗೆ ಏರಿಸಲಾಗಿದೆ. ಇದರಿಂದ ಗ್ರಾಹಕರಿಗೆ 6 ರೂ. ಹೆಚ್ಚುವರಿ ಹೊರೆ ಬೀಳಲಿದ್ದು, ಶೇಕಡಾ 21.43ರಷ್ಟು ಬೆಲೆ ಹೆಚ್ಚಳವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರೂ. ಹೆಚ್ಚಿಸಿರುವ ಸರ್ಕಾರ, ಇದೀಗ ಒಂದೇ ಬಾರಿಗೆ ಶೇಕಡಾ 21ರಿಂದ 26ರಷ್ಟು ಮೊಸರಿನ ಬೆಲೆ ಏರಿಕೆ ಮಾಡಿದೆ. ಇದರಿಂದ ಬಡವರು ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಜೋಶಿ ಆರೋಪಿಸಿದ್ದಾರೆ.
ಮೊಸರು ಐಷಾರಾಮಿ ವಸ್ತುವಲ್ಲ, ಅದು ಪ್ರತಿಯೊಂದು ಕುಟುಂಬದ ದೈನಂದಿನ ಆಹಾರದ ಭಾಗವಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕ ಅನುದಾನ ನೀಡಲು ಸಾಧ್ಯವಾಗದ ಸರ್ಕಾರ, ತನ್ನ ಆಡಳಿತಾತ್ಮಕ ವೈಫಲ್ಯ ಮತ್ತು ಆರ್ಥಿಕ ಸಮಸ್ಯೆಗಳ ಹೊಣೆಯನ್ನು ಜನಸಾಮಾನ್ಯರ ಮೇಲೆ ಹೊರಿಸುತ್ತಿದೆ. ರಾಜಕೀಯ ತಪ್ಪುಗಳಿಗೆ ಬಡವರಿಂದ ದಂಡ ವಸೂಲಿ ಮಾಡುವಂತಹ ನೀತಿಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಇದು ಸಂಪೂರ್ಣ ಜನವಿರೋಧಿ ಹಾಗೂ ದುಬಾರಿ ಸರ್ಕಾರದ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಹಾಲು ಮತ್ತು ಮೊಸರಿನ ದರ ಏರಿಕೆ ವಿಚಾರವಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಈಗಾಗಲೇ ನಾಲ್ಕನೇ ಬಾರಿ ಹಾಲಿನ ದರ ಹೆಚ್ಚಳವಾಗಿದೆ ಎಂದು ಆರೋಪಿಸಿರುವ ಅವರು, ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರು ಬೆಲೆ ಏರಿಕೆಯ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ. ಸರ್ಕಾರ ಪಾಪರ್ ಆಗಿದೆ ಎಂದು ಆರ್. ಅಶೋಕ್ ಟೀಕಿಸಿದ್ದಾರೆ.





