ಬೆಂಗಳೂರು, ಜುಲೈ(14): ನಾಲ್ಕು ವರ್ಷಗಳ ಹಿಂದೆ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್-19 (ಕೊರೊನಾ) ಸೋಂಕಿನ ಬಗ್ಗೆ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚಿದ್ದು ಈ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಕರ್ನಾಟಕದಲ್ಲೂ ಸೋಂಕಿನ ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಯ ಗಮನ ಸೆಳೆದಿದೆ.
ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಶಂಕೆಯೊಂದಿಗೆ ಇಬ್ಬರು ಮೃತಪಟ್ಟಿದ್ದಾರೆ . ಅಲ್ಲದೆ ಎಂಟು ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೊಸ ರೂಪಾಂತರ (ವೆರಿಯಂಟ್) ಇರುವ ಸಾಧ್ಯತೆ ಹಿನ್ನೆಲೆ ಐದು ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV)ಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಜೂನ್ ತಿಂಗಳಲ್ಲಿ 14 ಪ್ರಕರಣಗಳು ದಾಖಲಾಗಿದ್ದರೆ, ಜುಲೈ ಮೊದಲ ಹತ್ತು ದಿನಗಳಲ್ಲೇ 32 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಒಟ್ಟು 193 ಶಂಕಿತರನ್ನು ಪರೀಕ್ಷಿಸಿದ ವೇಳೆ ಈ ಪ್ರಕರಣಗಳು ಪತ್ತೆಯಾಗಿವೆ.
ಆದರೆ, ಈ ಕುರಿತು ಸಾರ್ವಜನಿಕರು ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತರಾದ ಗುರುದತ್ತ್ ಹೆಗಡೆ ಧೈರ್ಯ ತುಂಬಿದ್ದಾರೆ. ಆಂಧ್ರದ ಸಾವುಗಳು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ ಮತ್ತು ಕರ್ನಾಟಕದಲ್ಲಿ ಪತ್ತೆಯಾಗಿರುವ ಪ್ರಕರಣಗಳು ತೀವ್ರ ಲಕ್ಷಣ ರಹಿತವಾಗಿವೆ. ಶಸ್ತ್ರಚಿಕಿತ್ಸೆಗೆ ಮುನ್ನ ನಡೆಸುವ ಕಡ್ಡಾಯ ತಪಾಸಣೆಯ ವೇಳೆ ಇವು ಪತ್ತೆಯಾಗುತ್ತಿವೆ. ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜನರು ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.
ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ವಿಶೇಷವಾಗಿ ವಯಸ್ಸಾದವರು, ಗರ್ಭಿಣಿಯರು, ಸಣ್ಣ ಮಕ್ಕಳು ಮತ್ತು ಮಧುಮೇಹ, ರಕ್ತದೊತ್ತಡ, ಅಸ್ತಮಾದಂತಹ ದೀರ್ಘಕಾಲೀನ ಕಾಯಿಲೆಗಳಿರುವವರು ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಆದಷ್ಟು ತಪ್ಪಿಸುವುದು ಮತ್ತು ಗುಂಪು ಸೇರುವ ಕಾರ್ಯಕ್ರಮಗಳಿಂದ ದೂರವಿರುವುದು ಒಳಿತು. ಸೋಂಕಿನ ಸಾಮಾನ್ಯ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು, ಗಂಟಲು ನೋವು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಕ್ಲಿನಿಕ್‌ಗೆ ಭೇಟಿ ನೀಡಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಹಾಗೇ ಜನರು ಸ್ವಚ್ಛತೆ, ಕೈತೊಳೆಯುವ ಅಭ್ಯಾಸ ಹಾಗೂ ಅಗತ್ಯವಿದ್ದರೆ ಮಾಸ್ಕ್ ಧರಿಸುವಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಿದೆ.





