ಕರ್ನಾಟಕದ ಕ್ರೀಡಾ ವಲಯಕ್ಕೆ ರಾಜ್ಯ ಸರ್ಕಾರ ಒಂದು ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ಬೆಂಗಳೂರಿನ ಹೊರವಲಯವಾದ ಬೊಮ್ಮಸಂದ್ರದ ಸೂರ್ಯ ಸಿಟಿಯಲ್ಲಿ 60,000 ಆಸನ ಸಾಮರ್ಥ್ಯದ ಜಗತ್ತಿನ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಕ್ರೀಡಾಂಗಣವು ದೇಶದಲ್ಲೇ ಎರಡನೇ ಅತಿದೊಡ್ಡ ಸ್ಟೇಡಿಯಂ ಎಂಬ ಖ್ಯಾತಿಯನ್ನು ಪಡೆಯಲಿದೆ.
₹1,650 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯ ಸಂಪೂರ್ಣ ಹೊಣೆಗಾರಿಕೆಯನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿ (KHB) ವಹಿಸಿಕೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಡಿಸಿಎಂ ಡಿಕೆಶಿಯವರ ಪೋಸ್ಟ್‌ನಲ್ಲಿ ಏನಿದೆ?
ಬೊಮ್ಮಸಂದ್ರದ ಸೂರ್ಯ ಸಿಟಿಯ 75 ಎಕರೆ ವಿಸ್ತೀರ್ಣದಲ್ಲಿ ಈ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಈ ಕ್ರೀಡಾಂಗಣವು ಕೇವಲ ಕ್ರಿಕೆಟ್‌ಗೆ ಸೀಮಿತವಾಗದೆ, ಒಲಿಂಪಿಕ್ ಶೈಲಿಯ ಸ್ವಿಮ್ಮಿಂಗ್ ಪೂಲ್, ಜಿಮ್, ತರಬೇತಿ ಕೇಂದ್ರಗಳು, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯಗಳು, ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗಾಗಿ ಅತಿಥಿಗೃಹ, ರೆಸ್ಟೋರೆಂಟ್, ಹೊಟೇಲ್‌ಗಳು ಹಾಗೂ ಅಂತಾರಾಷ್ಟ್ರೀಯ ಸೆಮಿನಾರ್ ಹಾಲ್‌ಗಳನ್ನು ಒಳಗೊಂಡಿರಲಿದೆ. ಈ ಸ್ಟೇಡಿಯಂ ಜಾಗತಿಕ ಗುಣಮಟ್ಟದ ಸೌಲಭ್ಯಗಳೊಂದಿಗೆ ಸುಸಜ್ಜಿತ ಕಟ್ಟಡವಾಗಿರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Bengaluru’s Big Leap into Global Sports!
75 Acres • ₹1,650 Cr • 60,000 Seats
India’s 2nd Largest Stadium: Coming Soon pic.twitter.com/YNMNiSbqxX
— DK Shivakumar (@DKShivakumar) August 21, 2025
2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಟ್ರೋಫಿ ಗೆದ್ದಿತ್ತು. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆ ಸಂಭವಿಸಿತ್ತು. ಇದರಲ್ಲಿ 11 ಜನರು ದುರದೃಷ್ಟವಶಾತ್ ಜೀವ ಕಳೆದುಕೊಂಡಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲಿನ ಸೀಮಿತ ಜಾಗದಿಂದಾಗಿ ಜನಸಂದಣಿಯ ನಿಯಂತ್ರಣ ಕಷ್ಟಕರವಾಗಿತ್ತು. ಇದು ಕಾಲ್ತುಳಿತಕ್ಕೆ ಕಾರಣವಾಯಿತು. ಈ ಘಟನೆಯ ಬೆನ್ನಲ್ಲೇ, ರಾಜ್ಯ ಸರ್ಕಾರವು ವಿಶಾಲವಾದ ಕ್ರೀಡಾಂಗಣವನ್ನು ನಿರ್ಮಿಸಲು ತೀರ್ಮಾನಿಸಿದೆ.
ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ತನಿಖಾ ಆಯೋಗವು ಚಿನ್ನಸ್ವಾಮಿ ಕ್ರೀಡಾಂಗಣವನ್ನು ಬೆಂಗಳೂರಿನ ಹೊರವಲಯಕ್ಕೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸಿನ ಆಧಾರದ ಮೇಲೆ, ಸರ್ಕಾರವು ಬೊಮ್ಮಸಂದ್ರದಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಈ ಹೊಸ ಕ್ರೀಡಾಂಗಣವು ಚಿನ್ನಸ್ವಾಮಿಯ ಜಾಗದ ಸಮಸ್ಯೆಗೆ ಪರಿಹಾರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯಕ್ಕೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್ ಸರಣಿಗಳು ಅಥವಾ ಟೂರ್ನಿಗಳು ನಡೆಯುತ್ತಿಲ್ಲ. ಮುಂದಿನ ಪಂದ್ಯಗಳನ್ನು ಹೊಸ ಕ್ರೀಡಾಂಗಣದಲ್ಲೇ ಆಯೋಜಿಸುವ ಸಾಧ್ಯತೆ ಇದೆ.





