ಸಿಲಿಕಾನ್‌ ಸಿಟಿಯಲ್ಲಿ ತಲೆ ಎತ್ತಲಿದೆ ಜಗತ್ತಿನ 2ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ: ವೆಚ್ಚ ಎಷ್ಟು?

ಬೆಂಗಳೂರಿನಲ್ಲಿ ಜಗತ್ತಿನ 2ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

Untitled design (68)

ಕರ್ನಾಟಕದ ಕ್ರೀಡಾ ವಲಯಕ್ಕೆ ರಾಜ್ಯ ಸರ್ಕಾರ ಒಂದು ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ಬೆಂಗಳೂರಿನ ಹೊರವಲಯವಾದ ಬೊಮ್ಮಸಂದ್ರದ ಸೂರ್ಯ ಸಿಟಿಯಲ್ಲಿ 60,000 ಆಸನ ಸಾಮರ್ಥ್ಯದ ಜಗತ್ತಿನ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಕ್ರೀಡಾಂಗಣವು ದೇಶದಲ್ಲೇ ಎರಡನೇ ಅತಿದೊಡ್ಡ ಸ್ಟೇಡಿಯಂ ಎಂಬ ಖ್ಯಾತಿಯನ್ನು ಪಡೆಯಲಿದೆ.

₹1,650 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯ ಸಂಪೂರ್ಣ ಹೊಣೆಗಾರಿಕೆಯನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿ (KHB) ವಹಿಸಿಕೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಡಿಸಿಎಂ ಡಿಕೆಶಿಯವರ ಪೋಸ್ಟ್‌ನಲ್ಲಿ ಏನಿದೆ?

ಬೊಮ್ಮಸಂದ್ರದ ಸೂರ್ಯ ಸಿಟಿಯ 75 ಎಕರೆ ವಿಸ್ತೀರ್ಣದಲ್ಲಿ ಈ ಕ್ರಿಕೆಟ್‌ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಈ ಕ್ರೀಡಾಂಗಣವು ಕೇವಲ ಕ್ರಿಕೆಟ್‌ಗೆ ಸೀಮಿತವಾಗದೆ, ಒಲಿಂಪಿಕ್ ಶೈಲಿಯ ಸ್ವಿಮ್ಮಿಂಗ್ ಪೂಲ್, ಜಿಮ್, ತರಬೇತಿ ಕೇಂದ್ರಗಳು, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯಗಳು, ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗಾಗಿ ಅತಿಥಿಗೃಹ, ರೆಸ್ಟೋರೆಂಟ್, ಹೊಟೇಲ್‌ಗಳು ಹಾಗೂ ಅಂತಾರಾಷ್ಟ್ರೀಯ ಸೆಮಿನಾರ್ ಹಾಲ್‌ಗಳನ್ನು ಒಳಗೊಂಡಿರಲಿದೆ. ಈ ಸ್ಟೇಡಿಯಂ ಜಾಗತಿಕ ಗುಣಮಟ್ಟದ ಸೌಲಭ್ಯಗಳೊಂದಿಗೆ ಸುಸಜ್ಜಿತ ಕಟ್ಟಡವಾಗಿರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಟ್ರೋಫಿ ಗೆದ್ದಿತ್ತು. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆ ಸಂಭವಿಸಿತ್ತು. ಇದರಲ್ಲಿ 11 ಜನರು ದುರದೃಷ್ಟವಶಾತ್ ಜೀವ ಕಳೆದುಕೊಂಡಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲಿನ ಸೀಮಿತ ಜಾಗದಿಂದಾಗಿ ಜನಸಂದಣಿಯ ನಿಯಂತ್ರಣ ಕಷ್ಟಕರವಾಗಿತ್ತು. ಇದು ಕಾಲ್ತುಳಿತಕ್ಕೆ ಕಾರಣವಾಯಿತು. ಈ ಘಟನೆಯ ಬೆನ್ನಲ್ಲೇ, ರಾಜ್ಯ ಸರ್ಕಾರವು ವಿಶಾಲವಾದ ಕ್ರೀಡಾಂಗಣವನ್ನು ನಿರ್ಮಿಸಲು ತೀರ್ಮಾನಿಸಿದೆ.

ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ತನಿಖಾ ಆಯೋಗವು ಚಿನ್ನಸ್ವಾಮಿ ಕ್ರೀಡಾಂಗಣವನ್ನು ಬೆಂಗಳೂರಿನ ಹೊರವಲಯಕ್ಕೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸಿನ ಆಧಾರದ ಮೇಲೆ, ಸರ್ಕಾರವು ಬೊಮ್ಮಸಂದ್ರದಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಈ ಹೊಸ ಕ್ರೀಡಾಂಗಣವು ಚಿನ್ನಸ್ವಾಮಿಯ ಜಾಗದ ಸಮಸ್ಯೆಗೆ ಪರಿಹಾರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯಕ್ಕೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್ ಸರಣಿಗಳು ಅಥವಾ ಟೂರ್ನಿಗಳು ನಡೆಯುತ್ತಿಲ್ಲ. ಮುಂದಿನ ಪಂದ್ಯಗಳನ್ನು ಹೊಸ ಕ್ರೀಡಾಂಗಣದಲ್ಲೇ ಆಯೋಜಿಸುವ ಸಾಧ್ಯತೆ ಇದೆ.

Exit mobile version