ಶಿವಮೊಗ್ಗ: ಮೈಸೂರು-ತಾಳಗುಪ್ಪ ಇಂಟರ್‌ಸಿಟಿ ರೈಲು ಶಿವಮೊಗ್ಗ ನಗರದ ತುಂಗಾ ನದಿಯ ಸೇತುವೆಯ ಮೇಲೆ ರೈಲಿನ ಬೋಗಿಗಳು ಕಳಚಿಕೊಂಡ ಘಟನೆ ಇಂದು ನಡೆದಿದೆ. ಈ ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿತ್ತು, ಆದರೆ ರೈಲ್ವೆ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಈ ಘಟನೆಯಿಂದ ಶಿವಮೊಗ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಿದರು.
ತಾಳಗುಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ 16 ಬೋಗಿಗಳ ಈ ರೈಲು, ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ತುಂಗಾ ಸೇತುವೆಯ ಬಳಿ ಚಲಿಸುತ್ತಿತ್ತು. ರೈಲು ಸೇತುವೆಯ ಮೇಲೆ ಬರುತ್ತಿದ್ದಂತೆ, ಇಂಜಿನ್‌ನಿಂದ 10 ಬೋಗಿಗಳು ಸಂಪರ್ಕದಲ್ಲಿದ್ದರೆ, ಉಳಿದ 6 ಬೋಗಿಗಳು ಲಿಂಕ್ ಕಳಚಿಕೊಂಡು ಸೇತುವೆಯ ಆರಂಭದಲ್ಲೇ ನಿಂತುಬಿಟ್ಟವು. ಇಂಜಿನ್ 10 ಬೋಗಿಗಳೊಂದಿಗೆ ಸೇತುವೆಯ ಮಧ್ಯಭಾಗದವರೆಗೆ ಚಲಿಸಿತ್ತು. ಆದರೆ ಉಳಿದ ಬೋಗಿಗಳು ಇಂಜಿನ್ ಇಲ್ಲದೆ ಸುಮಾರು 20 ನಿಮಿಷಗಳ ಕಾಲ ಸೇತುವೆಯ ಆರಂಭದಲ್ಲಿ ನಿಂತಿದ್ದವು. ಈ ಘಟನೆಯಿಂದ ಪ್ರಯಾಣಿಕರಲ್ಲಿ ಭಯ ಮತ್ತು ಆತಂಕ ಹೆಚ್ಚಾಗಿತ್ತು.
ಈ ಘಟನೆಯನ್ನು ಗಮನಿಸಿದ ಕೆಲವು ಪ್ರಯಾಣಿಕರು ತಕ್ಷಣವೇ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಮಸ್ಯೆಯನ್ನು ಸರಿಪಡಿಸಲು ಮುಂದಾದರು. ಸುಮಾರು 45 ನಿಮಿಷಗಳ ಶ್ರಮದ ನಂತರ, ಕಳಚಿಕೊಂಡಿದ್ದ ಬೋಗಿಗಳನ್ನು ಮತ್ತೆ ಲಿಂಕ್ ಮಾಡಿ, ರೈಲನ್ನು ಸರಿಪಡಿಸಲಾಯಿತು. ಈ ಕಾರಣದಿಂದ ರೈಲು 45 ನಿಮಿಷ ತಡವಾಗಿ ಮೈಸೂರಿಗೆ ತೆರಳಿತ್ತು. ಈ ಘಟನೆಯಿಂದ ಯಾವುದೇ ಜೀವಹಾನಿ ಅಥವಾ ಗಾಯಗಳಾಗಿಲ್ಲ. ಆದರೆ ಶಿವಮೊಗ್ಗದ ಗುಂಡಪ್ಪ ಶೆಡ್ ರೈಲ್ವೆ ಗೇಟ್ ಬಳಿಯ ಸೇತುವೆಯಲ್ಲಿ ರೈಲು ಅಡ್ಡಗಟ್ಟಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.





