ಮೈಸೂರು: ಖಾಸಗಿ ಶಾಲೆಯೊಂದರಲ್ಲಿ 13 ವರ್ಷದ ವಿದ್ಯಾರ್ಥಿಯ ಮೇಲೆ ಸಹಪಾಠಿಗಳೇ ಕ್ರೂರ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನೆ ಜಯಲಕ್ಷ್ಮಿಪುರಂ ಪ್ರದೇಶದಲ್ಲಿರುವ ಹೆಸರಾಂತ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದಿದೆ.
ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯು ತರಗತಿಯ ಲೀಡರ್ ಆಗಿದ್ದ. ಇದನ್ನೇ ಕೆಲ ವಿದ್ಯಾರ್ಥಿಗಳು ಸಹಿಸಲಾರದೆ ನಿರಂತರವಾಗಿ ಅವನನ್ನು ಕಿರುಕುಳ ನೀಡುತ್ತಿದ್ದರೆಂದು ಮಾಹಿತಿ ಲಭ್ಯವಾಗಿದೆ.
ಲೀಡರ್ ಆಗಿದ್ದ ವಿದ್ಯಾರ್ಥಿಗೆ ಇತರವಿದ್ಯಾರ್ಥಿಗಳು ಹಣ ಕೇಳುತ್ತಿದ್ದರು. ಹಣ ಕೊಡದಿದ್ದರೆ ಮೊಬೈಲ್ ಕಸಿದುಕೊಳ್ಳುವುದು, ನಿಂದನೆ ಮಾಡುವುದು, ತಳ್ಳುವುದು ಮುಂತಾದ ಹಲ್ಲೆಗಳನ್ನು ನಡೆಸುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಶಾಲೆಯ ವಾಶ್‌ರೂಮ್‌ಗೆ ಹೋದಾಗ ಮೂವರು ವಿದ್ಯಾರ್ಥಿಗಳು ಚಿತ್ರಕಥೆಯಂತೆಯೇ ಅವನ ಮೇಲೆ ದಾಳಿ ನಡೆಸಿದ್ದಾರೆ.
ವಿದ್ಯಾರ್ಥಿಯ ಮರ್ಮಾಂಗಕ್ಕೆ ತೀವ್ರವಾಗಿ ಒದ್ದು ಗಾಯಗೊಳಿಸಿದ್ದಾರೆ. ಆತ ತಕ್ಷಣ ನೋವಿನಿಂದ ನೆಲಕ್ಕುರುಳಿದ್ದಾನೆ. ಆ ಬಾಲಕನಿಗೆ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಒಂದು ವೃಷಣ ಕಳೆದುಕೊಂಡಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಘಟನೆಯ ನಂತರ ಆ ಬಾಲಕನ ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿರ್ಲಕ್ಷ್ಯದಿಂದ ಬೇಸತ್ತ ಪೋಷಕರು, ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (KSCPCR) ನ ಸಹಾಯವನ್ನು ಕೂಡ ಕೇಳಿಕೊಂಡಿದ್ದಾರೆ.





