ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಷ್ಟೇ ಅಲ್ಲ, ರಾಜ್ಯದ ಹಲವು ಭಾಗಗಳಲ್ಲಿ ನಿರ್ಮಾಣ ಹಂತದ ಕಟ್ಟಡಗಳು, ಖಾಲಿ ಜಾಗಗಳು, ಹೊಲ-ಗದ್ದೆಗಳಲ್ಲಿ ಒಂದು ವಿಶೇಷ ಫೋಟೋ ಕಣ್ಣಿಗೆ ಬೀಳುತ್ತಿತ್ತು. ಕೆಂಪು ಸೀರೆಯನ್ನುಟ್ಟ, ದೊಡ್ಡ ದೊಡ್ಡ ಕಣ್ಣುಗಳನ್ನು ಬಿಟ್ಟುಕೊಂಡು, ಹಣೆಗೆ ಅಗಲವಾದ ಕುಂಕುಮವಿಟ್ಟ ಮಹಿಳೆಯ ಫೋಟೋವನ್ನು ಕನ್ನಡಿಗರು ‘ದೃಷ್ಟಿಗೊಂಬೆ’ಯಾಗಿ ಬಳಸುತ್ತಿದ್ದರು. “ದೃಷ್ಟಿ ಆಗದೆ ಇರಲಿ” ಎಂಬ ನಂಬಿಕೆಯಿಂದ ಈ ಫೋಟೋ ಅನೇಕ ಕಡೆ ಅಂಟಿಸಲಾಗಿತ್ತು.
ಈ ಫೋಟೋ ಇಷ್ಟೊಂದು ಜನಪ್ರಿಯವಾಗಿದ್ದರೂ, ಅದರಲ್ಲಿ ಕಾಣುವ ಮಹಿಳೆ ಯಾರು ಎಂಬುದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. “ಈಕೆ ಯಾರು?”, “ಇಂತಹ ಫೋಟೋ ಯಾಕೆ ಎಲ್ಲೆಲ್ಲೂ ಇದೆ?” ಎಂಬ ಪ್ರಶ್ನೆಗಳು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಲೇ ಇದ್ದವು. ಇದೀಗ ಕೊನೆಗೂ ಈ ‘ಮಿಸ್ಟರಿ ಮಹಿಳೆ’ಯ ಗುರುತು ಪತ್ತೆಯಾಗಿದ್ದು, ಕನ್ನಡಿಗರ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಈ ವೈರಲ್ ದೃಷ್ಟಿಗೊಂಬೆ ಫೋಟೋದಲ್ಲಿ ಕಾಣುವವರು ಕರ್ನಾಟಕ ಮೂಲದ ಯೂಟ್ಯೂಬರ್ ನಿಹಾರಿಕಾ ರಾವ್ ಎಂಬುದು ಇದೀಗ ದೃಢಪಟ್ಟಿದೆ. 2023ರಲ್ಲಿ ವೈರಲ್ ಆಗಿದ್ದ ಒಂದು ವೀಡಿಯೊ ಕ್ಲಿಪ್‌ನಿಂದ ಈ ಫೋಟೋವನ್ನು ಕ್ರಾಫ್ ಮಾಡಿ ಬಳಸಲಾಗಿದೆ ಎನ್ನುವುದು ತಿಳಿದುಬಂದಿದೆ. ಆ ವೀಡಿಯೊದಲ್ಲಿನ ನಿಹಾರಿಕಾ ಅವರ ಮುಖಭಾವವೇ ನಂತರ ದೃಷ್ಟಿಗೊಂಬೆ ಫೋಟೋ ಆಗಿ ವೈರಲ್ ಆಗಿದೆ…
ಈ ವಿಚಾರ ಬೆಳಕಿಗೆ ಬರಲು ಬೆಂಗಳೂರಿನ ಮಹಿಳೆಯೊಬ್ಬರು ಮಾಡಿದ ಸೋಷಿಯಲ್ ಮೀಡಿಯಾ ಪೋಸ್ಟ್ ಕಾರಣವಾಗಿದೆ. ಇತ್ತೀಚೆಗೆ ಆಕೆ ನಗರದ ಹೊರಭಾಗಕ್ಕೆ ಪ್ರಯಾಣಿಸುವ ವೇಳೆ ಈ ಫೋಟೋವನ್ನು ಪದೇಪದೇ ಗಮನಿಸಿದ್ದಾರೆ. ವಿಶೇಷವಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿ, ಖಾಲಿ ಪ್ಲಾಟ್‌ಗಳ ಬಳಿ ಈ ಚಿತ್ರ ಅಂಟಿಸಿರುವುದು ಆಕೆಗೆ ಕುತೂಹಲ ಮೂಡಿಸಿತು. “ಈ ಸೀರೆಯನ್ನುಟ್ಟ ಮಹಿಳೆ ಯಾರು?” ಎಂಬ ಪ್ರಶ್ನೆಯೊಂದಿಗೆ ಆಕೆ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಫೋಟೋ ಹಂಚಿಕೊಂಡರು.
ಅಷ್ಟೇ ಅಲ್ಲದೆ, ಆ ಮಹಿಳೆ ಫೋಟೋವನ್ನು ಕ್ಲಿಕ್ ಮಾಡಿ ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದರೂ ಯಾವುದೇ ಸ್ಪಷ್ಟ ಮಾಹಿತಿ ಸಿಗಲಿಲ್ಲ ಎಂದು ತಿಳಿಸಿದ್ದಾರೆ. ಜನವರಿ 5ರಂದು ಹಂಚಿಕೊಂಡ ಈ ಪೋಸ್ಟ್ ಕೆಲವೇ ದಿನಗಳಲ್ಲಿ ಭಾರೀ ವೈರಲ್ ಆಗಿದ್ದು, ಸುಮಾರು 3.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾವಿರಾರು ಜನರು ಕಾಮೆಂಟ್ ಮಾಡಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ AI-ರಚಿತ ಪ್ರತಿಕ್ರಿಯೆಯ ಪ್ರಕಾರ, ಪೋಸ್ಟರ್‌ನಲ್ಲಿರುವ ಮಹಿಳೆಯನ್ನು ಯೂಟ್ಯೂಬರ್ ನಿಹಾರಿಕಾ ರಾವ್ ಎಂದು ಗುರುತಿಸಲಾಗಿದೆ. 2023ರಲ್ಲಿ ವೈರಲ್ ಆದ ವೀಡಿಯೊ ಕ್ಲಿಪ್‌ನಿಂದ ಈ ದೃಶ್ಯ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಮಾಹಿತಿ ಹೊರಬಿದ್ದ ಬಳಿಕ, ನಿಹಾರಿಕಾ ರಾವ್ ಹೆಸರು ಕೂಡ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗತೊಡಗಿದೆ.
ಸಾಮಾನ್ಯವಾಗಿ ದೃಷ್ಟಿಗೊಂಬೆ ಎಂದರೆ ನಿಂಬೆ-ಮೆಣಸಿನಕಾಯಿ ಅಥವಾ ಭಯಾನಕ ಮುಖಭಾವದ ಚಿತ್ರಗಳು ಬಳಸಲಾಗುತ್ತಿತ್ತು. ಆದರೆ ಈ ಮಹಿಳೆಯ ಫೋಟೋ ಮಾತ್ರ ವಿಭಿನ್ನವಾಗಿದ್ದು, ಒಂದು ರೀತಿಯ ತೀವ್ರ ದೃಷ್ಟಿ ತಡೆಯುವ ಭಾವನೆ ನೀಡುತ್ತದೆ ಎಂಬ ಕಾರಣಕ್ಕೆ ಜನಪ್ರಿಯವಾಯಿತು ಎನ್ನಲಾಗುತ್ತಿದೆ. ಈ ಫೋಟೋ ಹೇಗೆ ಇಷ್ಟೊಂದು ವ್ಯಾಪಕವಾಗಿ ಹರಡಿತು, ಯಾರು ಮೊದಲು ಬಳಸಿದರು ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.





