ಬೆಂಗಳೂರು (ಆ.25): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದು, ಮರುಪರಿಶೀಲನೆಗೆ ಆಗ್ರಹಿಸಿದ್ದಾರೆ.
ಈ ನಡುವೆ, ಬಾನು ಮುಷ್ತಾಕ್ ಅವರು ಕನ್ನಡ ಭುವನೇಶ್ವರಿ ಕುರಿತು ಹೇಳಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದು, “ಹೇಗಿದ್ದರೂ ಬಾನು ಮುಷ್ತಾಕ್ ಅವರು ಜಾತ್ಯಾತೀತರಲ್ಲವೇ. ತಲೆಗೆ ಹೂವು ಮುಡಿದು, ಹಣೆಗೆ ಕುಂಕುಮ ಧರಿಸಿ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲಿ” ಎಂದು ಸವಾಲು ಹಾಕಿದ್ದಾರೆ.
ಬಾನು ಮುಷ್ತಾಕ್ ಅವರು ನಮ್ಮ ನೆಲದ ಮಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ದಸರಾ ಸಂಭ್ರಮವು ಹಿಂದೂ ಧರ್ಮದ ಹಬ್ಬವಾಗಿದ್ದು, ಅದರ ಸಾಂಪ್ರದಾಯಿಕ ಮಹತ್ವವನ್ನು ಕಾಪಾಡಬೇಕು ಎಂದು ಮುನಿರತ್ನ ಹೇಳಿದ್ದಾರೆ. “ಬಾನು ಮುಷ್ತಾಕ್ ಹಣೆಗೆ ಕುಂಕುಮ, ತಲೆಗೆ ಹೂವು ಮುಡಿದು ಉದ್ಘಾಟನೆ ಮಾಡಲಿ. ಹೇಗಿದ್ದರೂ ಜಾತ್ಯಾತೀತರಲ್ಲವೇ. ಹಿಂದೂ ಧರ್ಮದ ಹಬ್ಬ ಇದು. ಹೀಗಾಗಿ ಕುಂಕುಮ, ಹೂವು ಮುಡಿದು ಕಾರ್ಯಕ್ರಮ ಉದ್ಘಾಟಿಸಲಿ” ಎಂದು ಅವರು ಸವಾಲು ಎಸೆದಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ದಸರಾ ಮಹೋತ್ಸವವು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು, ಪ್ರತಿ ವರ್ಷ ಸೆಪ್ಟೆಂಬರ್-ಅಕ್ಟೋಬರ್ ನಡುವೆ 10 ದಿನಗಳ ಕಾಲ ನಡೆಯುತ್ತದೆ. ಈ ಬಾರಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾನು ಮುಷ್ತಾಕ್ ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಬಾನು ಮುಷ್ತಾಕ್ ಅವರ ಕೃತಿ ‘ಎದೆಯ ಹಣತೆ’ಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರೆತಿದ್ದು, ಕರ್ನಾಟಕದ ಲೇಖಕಿಗೆ ಈ ಪ್ರಶಸ್ತಿ ಸಿಗುತ್ತಿರುವುದು ಸಂತಸದ ಸಂಗತಿ ಎಂದು ಸಿಎಂ ಹೇಳಿದ್ದಾರೆ. ಅಲ್ಲದೆ, ಬಾನು ಅವರು ರೈತ ಸಂಘಟನೆ, ಕನ್ನಡ ಚಳವಳಿ ಮತ್ತು ಪ್ರಗತಿಪರ ಚಿಂತನೆಯ ಹಿನ್ನೆಲೆಯುಳ್ಳವರು ಎಂದು ಪ್ರಶಂಸಿಸಿದ್ದಾರೆ.
ಆದರೆ, ಬಿಜೆಪಿ ನಾಯಕರು ಈ ಆಯ್ಕೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಅವರು, “ದಸರಾ ಜಾತ್ಯಾತೀತ ಪ್ರತೀಕವಲ್ಲ, ಅದು ಧಾರ್ಮಿಕ ಆಚರಣೆ. ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆಯನ್ನು ಧಿಕ್ಕರಿಸಲಾಗಿದೆ. ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ದೇವಿಯನ್ನು ದೇವರು ಎಂದು ಒಪ್ಪಿಕೊಳ್ಳುತ್ತಾರಾ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸರ್ಕಾರ ಧಾರ್ಮಿಕ ಸಂಪ್ರದಾಯಗಳನ್ನು ಕೆಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೂಡ, “ದಸರಾ ಉದ್ಘಾಟನೆ ಬಾನು ಮುಷ್ತಾಕ್ ಅವರ ಇಸ್ಲಾಂ ನಂಬಿಕೆಗಳಿಗೆ ವಿರುದ್ಧವಾಗಿದೆ” ಎಂದು ಹೇಳಿದ್ದಾರೆ.
ಇದರ ನಡುವೆ, ಧರ್ಮಸ್ಥಳದ ಕುರಿತು ಮುನಿರತ್ನ ಅವರು ಮಾತನಾಡಿದ್ದು, “ಧರ್ಮಸ್ಥಳದ ಮೇಲೆ ಷಡ್ಯಂತರ ಮಾಡ್ತಾ ಇರೋರೆಲ್ಲಾ ಸಮೀರ್‌ನ ಅಪ್ಪನ ಮಕ್ಕಳು. ಸಮೀರನ ಅಪ್ಪನ ಮಕ್ಕಳು ಧರ್ಮಸ್ಥಳವನ್ನು ಮೆಕ್ಕಾ ಮಾಡಲು ಪ್ಲಾನ್ ಮಾಡಿದ್ದರು. ವೀರೇಂದ್ರ ಹೆಗ್ಗಡೆ ಜೈನ್ ಅಂತಿರಲ್ಲ. ಅವರು ಸತ್ತಾಗಲೂ ಚಿತೆಯನ್ನೆ ಏರೋದು. ನಮ್ಮ ಹಿಂದುಗಳಲ್ಲಿ ಎರಡು ವಿಧ. ಒಂದು ಹೆಣ ಹೂಳೋದು ಇನ್ನೊಂದು ಚಿತೆ. ಹೀಗಾಗಿ ಹೆಗ್ಗಡೆಯವರು ಕೂಡ ನಮ್ಮ ಹಿಂದೂನೇ” ಎಂದು ಹೇಳಿದ್ದಾರೆ.
ಸುಜಾತಾ ಭಟ್ ಕುರಿತು ಮಾತನಾಡಿದ ಮುನಿರತ್ನ, “ಸುಜಾತಾ ಭಟ್ ಒಳ್ಳೆಯ ಕಲಾವಿದೆ. ಅವರು ಮೊದಲೆ ಸಿಕ್ಕಿದ್ರೆ ಒಳ್ಳೆಯ ಪಾತ್ರ ನೀಡಬಹುದಿತ್ತು. ಅವರು ಬೆಸ್ಟ್ ಆಕ್ಟರ್. ನಾನು ಒಬ್ಬ ನಿರ್ಮಾಪಕನಾಗಿ ಹೇಳ್ತಿದ್ದೇನೆ. ಅವರು ಒಳ್ಳೆಯ ನಟಿ. ನಮ್ಮ ಸಿನಿಮಾದಲ್ಲಿ ಸಹ ಕಲಾವಿದರ ಕೊರತೆ ಇದೆ. ಸುಜಾತಾ ಭಟ್ ನೈಜವಾಗಿ ಆಕ್ಟ್ ಮಾಡ್ತಾರೆ” ಎಂದು ಲೇವಡಿ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಕುರಿತು ಪ್ರಶ್ನಿಸಿದ ಮುನಿರತ್ನ, “ಡಿಕೆ ಶಿವಕುಮಾರ್ ಇದನ್ನು ಈಗ ಷಡ್ಯಂತರ ಎಂದು ಹೇಳ್ತಾರೆ. ಮೊದಲೆ ಯಾಕೆ ಇದನ್ನು ಹೇಳಿಲ್ಲ. ಯಾಕೆ ಅನಾಮಿಕನ ವಿಚಾರಣೆ ಮಾಡಿಲ್ಲ” ಎಂದು ಕೇಳಿದ್ದಾರೆ.
ಬಾನು ಮುಷ್ತಾಕ್ ಅವರು ಈ ವಿವಾದಕ್ಕೆ ಪ್ರತಿಕ್ರಿಯಿಸಿ, “ದಸರಾ ಉದ್ಘಾಟನೆಗೆ ಆಹ್ವಾನ ಬಂದಿರುವುದು ಸಂತಸ ತಂದಿದೆ. ನನ್ನ ತಂದೆ ಕೆಆರ್‌ಎಸ್‌ನಲ್ಲಿ ಕೆಲಸ ಮಾಡುತ್ತಿದ್ದರು, ಪ್ರತಿ ವರ್ಷ ದಸರಾ ನೋಡಲು ಹೋಗುತ್ತಿದ್ದೆ” ಎಂದು ಹೇಳಿದ್ದಾರೆ. ಆದರೆ, ವಿರೋಧಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.





