ಕರ್ನಾಟಕ ಹೆಮ್ಮೆಯ ಏಕೈಕ ನಾಯಿತಳಿ ಮುಧೋಳ ಇಂದು ಜಗತ್ಪ್ರಸಿದ್ಧ ಶ್ವಾನ ತಳಿಯಾಗಿದೆ. ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ಪ್ರತೀಕವಾದ ಈ ತಳಿಯ ನಾಯಿಗಳು ತಮ್ಮ ಚಾಣಾಕ್ಷ ಬೇಟೆಗಾರಿಕೆಯಿಂದಾಗಿ ವಿಶ್ವಾದ್ಯಂತ ಪ್ರಖ್ಯಾತಿ ಪಡೆಯೋ ಮೂಲಕ ನಮ್ಮ ಕರುನಾಡಿನ ಹೆಸರನ್ನು ಎತ್ತರಕ್ಕೆ ಏರಿಸಿವೆ. ಮುಧೋಳ ಹೌಂಡ್ಸ್ ಎಂದು ಕರೆಯಲ್ಪಡುವ ಈ ಬೇಟೆ ನಾಯಿಗಳು ಅತ್ಯಂತ ವೇಗವಾಗಿ ಓಡಿ, ಬೇಟೆಯಾಡುವ ತೀಕ್ಷ್ಣಬುದ್ಧಿಯನ್ನು ಹೊಂದಿವೆ. ಈ ಬೇಟೆ ನಾಯಿಗಳು ತುಂಬಾ ಸಣಕಲು ದೇಹ ಹೊಂದಿದ್ದರೂ ಒಂದು ಹುಲಿಯನ್ನು ಕೂಡ ಎದುರಿಸಿ ಸೋಲಿಸಿ ಮಲಗಿಸುವ ಶಕ್ತಿಯನ್ನು ಹೊಂದಿವೆ.
ಅತ್ಯಂತ ಕಡಿಮೆ ಆಹಾರ ಸೇವಿಸಿ, ಬಹಳ ದಿವಸ ಬದುಕುವುದರಲ್ಲಿಯೂ ಇದು ಹೆಸರುವಾಸಿಯಾಗಿದೆ. ಹೀಗಾಗಿ ಯಾವುದೇ ಹವಾಮಾನಕ್ಕೆ ಹಾಗೂ ವಾತಾವರಣಕ್ಕೆ ಮತ್ತು ಎಲ್ಲ ರೀತಿಯ ಜನರಿಗೂ ಎಲ್ಲ ತರಹದ ಕಾರ್ಯಕ್ಕೂ ಸೂಕ್ತವಾದ ನಾಯಿಯಾಗಿದೆ. ಸ್ವಾಮಿನಿಷ್ಠೆಯಲ್ಲೂ ಎತ್ತಿದ ಕೈ ಅನ್ನೋ ಕಾರಣಕ್ಕೆ ಇವುಗಳನ್ನು ಮೊಟ್ಟ ಮೊದಲ ಬಾರಿ 2017ರಲ್ಲಿ ಭಾರತೀಯ ಸೇನೆಯಲ್ಲಿ ಗಡಿಯನ್ನು ಕಾಯಲು ಬಳಸಿಕೊಳ್ಳಲು ಅವಕಾಶ ನೀಡಲಾಯಿತು. ಈ ಶ್ವಾನಗಳು ಈಗ ಭಾರತ ಮತ್ತು ಪಾಕ್ ಗಡಿಯಲ್ಲಿ ಶತ್ರುಗಳ ಪಾಳಯದ ಎದೆ ನಡುಗಿಸುವಂತೆ ಕಾವಲು ಕಾಯುತ್ತಿವೆ.
ತೀಕ್ಷ್ಣ ಕಣ್ಣುಗಳನ್ನು ಹೊಂದಿರೋ ಈ ನಾಯಿಗಳ ಬಾಯಿಗೆ ಒಂದು ಬಾರಿ ಬೇಟೆ ಸಿಕ್ಕಿದರೆ ಅದನ್ನು ಬಾಯಿಯಿಂದ ಬಿಡಿಸುವುದು ಸಾಧ್ಯವೇ ಇಲ್ಲ. ಮುಧೋಳ ನಾಯಿಗಳು ಮನೆಯಲ್ಲಿ, ತೋಟದಲ್ಲಿ ಇದ್ದರೆ ಯಾವ ಸೆಕ್ಯೂರಿಟಿ ಗಾರ್ಡ್ನ ಅವಶ್ಯಕತೆ ಇರುವುದಿಲ್ಲ. ಥೇಟ್ ಸೈನಿಕನಂತೆ ಮನೆ ಮತ್ತು ತೋಟಗಳನ್ನು ಕಾಯಬಲ್ಲ ಈ ಶ್ವಾನಗಳು ಇವು ಒಂದು ಬಾರಿ ವೈರಿಯ ಬೆನ್ನಟ್ಟಿದರೆ, ಅದನ್ನು ಮಕಾಡೆ ಮಲಗಿಸಿ ರಕ್ತ ಹೀರೋವರೆಗೂ ಹಿಂದೆ ಸರಿಯುವುದಿಲ್ಲ,
ಮುಧೋಳ ನಾಯಿ ತಳಿಯ ಇತಿಹಾಸ ಬಹಳ ಆಸಕ್ತಿದಾಯಕವಾಗಿದೆ. ಮೊಗಲರು ಭಾರತಕ್ಕೆ ಬಂದಾಗ ಯುದ್ಧದಲ್ಲಿ ಬಳಸಿಕೊಳ್ಳಲು ತಮ್ಮೊಡನೆ ಮೊಟ್ಟ ಮೊದಲನೆಯ ಬಾರಿ ಈ ನಾಯಿಗಳನ್ನು ತಂದರು ಎಂದು ಪ್ರತೀತಿ ಇದೆ. ಮುಂದೆ ಔರಂಗಜೇಬನು ದಕ್ಷಿಣ ರಾಜ್ಯಗಳನ್ನು ಆಕ್ರಮಿಸಿದಾಗ, ತನ್ನ ಅಧೀನ ರಾಜರಿಗೆ ಈ ನಾಯಿಗಳನ್ನು ಪ್ರೀತಿಯ ಕಾಣಿಕೆಯಾಗಿ ಕೊಟ್ಟಿದ್ದನೆಂದೂ ಹೇಳುತ್ತಾರೆ. ಹೀಗೆ ಕರ್ನಾಟಕಕ್ಕೆ ಬಂದ ಈ ಬೇಟೆ ನಾಯಿಗಳನ್ನು ಆಗಿನ ವಿಜಾಪೂರದ ಮುಧೋಳ ಪ್ರಾಂತ್ಯದ ರಾಜರು ಪಾಲಿಸಿ, ಪೋಷಿಸಿ, ತಳಿ ಗುಣಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿದರು. ಇವರಲ್ಲಿ ಶ್ರೀಮಂತರಾಜಾ ಮಾಲೋಜಿರಾವ ಘೋರ್ಪಡೆಯವರು ಸ್ವತಃ ಶ್ವಾನಪ್ರೇಮಿಗಳಿದ್ದು, ಈ ಬೇಟೆನಾಯಿಗಳನ್ನು ಆಸಕ್ತಿವಹಿಸಿ ಅಭಿವೃದ್ಧಿಪಡಿಸಿ ‘ಮುಧೋಳ ಬೇಟೆ ನಾಯಿ’ ಎಂದು ಪ್ರಸಿದ್ಧಿ ಪಡೆಯಲು ಕಾರಣರಾದರು ಎಂದು ಹೇಳಬಹುದು.
ಇವುಗಳ ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ಕಂಡ ಮರಾಠಾ ಸಾಮ್ರಾಜ್ಯದ ದೊರೆ ಛತ್ರಪತಿ ಶಿವಾಜಿ ಇವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಾಕಿ ಅವುಗಳಿಗೆ ಸೇನೆಯ ತರಬೇತಿ ನೀಡಿ ತನ್ನ ಸೇನೆಯಲ್ಲಿ ಇಟ್ಟುಕೊಂಡಿದ್ದ ಎಂದು ಇತಿಹಾಸಗಳು ಹೇಳುತ್ತವೆ. ಮುಧೋಳ ಶ್ವಾನಗಳು ಮೊಟ್ಟ ಮೊದಲ ಬಾರಿಗೆ ಸೇನೆಯಲ್ಲಿ ಕಾರ್ಯಾಚರಣೆಗೆ ಬಳಕೆಯಾಗಿದ್ದು ಶಿವಾಜಿ ಮಹಾರಾಜರ ಸೇನೆಯಲ್ಲಿ.
ದೇಶದ ಇತರೆ ಭಾಗಗಳಲ್ಲಿ ಈ ತಳಿಗಳ ಸಂತತಿ ಕ್ಷೀಣಿಸಿದ್ದರೂ ಕರ್ನಾಟಕದ ಬಾಗಲಕೋಟೆ, ವಿಜಾಪೂರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮತ್ತು ಮಹಾರಾಷ್ಟ್ರದ ಕೊಲ್ಹಾಪೂರ ಮತ್ತು ಸಾಂಗ್ಲಿ ಜಿಲ್ಲೆಯ ಕೆಲವು ಶ್ವಾನಾಸಕ್ತರಲ್ಲಿ ಕಾಣಸಿಗುತ್ತವೆ. ಇತ್ತೀಚಿಗೆ ಅಂದರೆ 1994 ರಿಂದ ಈಚೆ ಬೆಂಗಳೂರಿನ ‘ಮೈಸೂರು ಕೆನೆಲ್ ಕ್ಲಬ್’, ವಿಜಾಪೂರದ ‘ವಿಜಾಪೂರ ಕೆನೆಲ್ ಕ್ಲಬ್’ ಹಾಗೂ ರಾಷ್ಟ್ರೀಯ ಸಂಸ್ಥೆಯಾದ ‘ಕೆನೆಲ್ ಕ್ಲಬ್ ಆಫ್ ಇಂಡಿಯಾ’ದವರ ಸತತ ಪ್ರಯತ್ನದಿಂದ ಅಂತರ್ ರಾಷ್ತ್ರೀಯ ಮಾನ್ಯತೆಯನ್ನು ಪಡೆದಿದೆ.
ವಿಜಯಪುರ ಜಿಲ್ಲಾ ಪಂಚಾಯತ್, ಬಾಗಲಕೋಟೆ ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ಸರಕಾರದ ಪಶು ಸಂಗೋಪನೆ ಇಲಾಖೆಯ ನಿರಂತರ ಪ್ರೋತ್ಸಾಹದಿಂದ ಮತ್ತು ಜನಪ್ರತಿನಿಧಿಗಳ ಆಸಕ್ತಿಯಿಂದ ಇವತ್ತು ರಾಜ್ಯದ ಹೆಮ್ಮೆಯ ತಳಿಯಾಗಿದೆ. ಸದ್ಯ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರದಲ್ಲಿ ಈ ಮುಧೋಳ ನಾಯಿಗಳ ಸಂತಾನಭಿವೃದ್ಧಿಗಾಗಿಯೇ ಮುಧೋಳ ಬೇಟೆನಾಯಿ ತಳಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ.