ಬೆಂಗಳೂರು: ಗಂಡನೊಂದಿಗೆ ಪದೇಪದೇ ಜಗಳವಾಡಿಕೊಂಡು ತವರು ಮನೆಗೆ ಬರುತ್ತಿದ್ದ ಮಗಳ ಮೇಲೆಯೇ ತಾಯಿ ಮಚ್ಚಿನಿಂದ ಕುತ್ತಿಗೆ ಕಡಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ದಾರುಣ ಘಟನೆ ನಡೆದಿದ್ದು ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಅಗ್ರಹಾರ ಲೇಔಟ್‌ನಲ್ಲಿರುವ ಹರಿಹರೇಶ್ವರ ದೇವಸ್ಥಾನದ ಬಳಿ ನಡೆದಿದೆ. ಹಲ್ಲೆಗೊಳಗಾದ ಯುವತಿ ಹೆಸರು ರಮ್ಯಾ (ವಯಸ್ಸು 22). ಆಕೆಯೇ ತಾಯಿ ಸರೋಜಮ್ಮ (48) ಆರೋಪಿ.
ರಮ್ಯ ಈಗಾಗಲೇ ಎರಡು-ಮೂರು ಬಾರಿ ಗಂಡನ ಜೊತೆ ಜಗಳವಾಡಿಕೊಂಡು ತವರು ಮನೆಗೆ ವಾಪಸ್ ಬರುತ್ತಿದ್ದಳು. ರಮ್ಯಾ ಪತಿಯೊಂದಿಗೆ ಪ್ರತಿ ದಿನ ಜಗಳವಾಡುತ್ತಿದ್ದಳು ಎನ್ನಲಾಗಿದೆ. ಇದರಿಂದ ತಾಯಿ ಸರೋಜಮ್ಮ ಬೇಸತ್ತು ಹೋಗಿದ್ದಳು. ನಿನ್ನೆ ಕೂಡ ಅದೇ ರೀತಿ ಗಂಡನ ಜೊತೆ ಜಗಳವಾಡಿ ತವರು ಮನೆಗೆ ಬಂದಿದ್ದಳು ರಮ್ಯ. ಇದೇ ವಿಚಾರಕ್ಕೆ ತಾಯಿ- ಮಗಳ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ತಾಯಿ ಸರೋಜಮ್ಮ ಮಗಳ ಕುತ್ತಿಗೆಗೆ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹಲ್ಲೆ ಮಾಡಿದ್ದಾರೆ.
ಸದ್ಯ ಗಾಯಾಳು ರಮ್ಯಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗಳ ಮೇಲೆ ಹಲ್ಲೆ ಮಾಡಿ ತಾಯಿ ಎಸ್ಕೇಪ್ ಆಗಿದ್ದಾಳೆ. ಸಂಪಿಗೆಹಳ್ಳಿ ಪೊಲೀಸರಿಂದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಯ ಮಾಲಿಕನಿಗೆ ಮಚ್ಚಿನಿಂದ ಹಲ್ಲೆ
ಬೆಂಗಳೂರಿನ ಪೀಣ್ಯಾ ಸುಪ್ರಭಾತನಗರದಲ್ಲಿ ಘಟನೆ. ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯ ಅಡಿಯಲ್ಲಿ ಬರುವ ಸುಪ್ರಭಾತನಗರದಲ್ಲಿ ಹಣದ ವಿಚಾರವಾಗಿ ಮಚ್ಚಿನಿಂದ ಹಲ್ಲೆ ನಡೆದಿದೆ. ಸಿದ್ದೇಶ್ವರ ಪ್ರಾವಿಜನ್ ಸ್ಟೋರ್‌ನ ಮಾಲಿಕ ಸಿದ್ದಲಿಂಗಯ್ಯ ಅವರು ಹಳೆಯ ಬಾಕಿ ಹಣ ಕೇಳಿದ್ದಕ್ಕೆ ಮೂರು ಜನರ ಗುಂಪಿನಿಂದ ಮಚ್ಚಿಯಿಂದ ಹಲ್ಲೆಗೆ ಮುಂದಾಗಿದ್ದು, ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮಾಲಿಕ ಸಿದ್ದಲಿಂಗಯ್ಯ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸಿದ ಪ್ರಮುಖ ಆರೋಪಿ ವಿಶ್ವನಾಥ್ ಸೇರಿದಂತೆ ಮೊವರ ವಿರುದ್ಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ:
ಆರೋಪಿ ವಿಶ್ವನಾಥ್ ಎಂಬಾತ, ಕಳೆದ ಆರು ತಿಂಗಳುಗಳಿಂದ ಅಂಗಡಿಗೆ ಸುಮಾರು ₹1,500 ಬಾಕಿ ಇಟ್ಟುಕೊಂಡಿದ್ದ. ಈ ಮೊದಲು ಬಾಕಿ ಹಣ ಪಾವತಿಸದಿದ್ದರೂ, ಇದೀಗ ಮತ್ತೆ ಅಂಗಡಿಗೆ ಬಂದು ಹೊಸದಾಗಿ ಸಾಲ ಕೇಳಿದ್ದ. ಅಂಗಡಿಯ ಮಾಲಿಕ ಸಿದ್ದಲಿಂಗಯ್ಯ ಅವರು ಹಳೆಯ ಬಾಕಿಯ ಬಗ್ಗೆ ಕೇಳಿದಾಗ, ವಿಶ್ವನಾಥ್ ತನ್ನ ಜತೆಗೆ ಕಾರಿನಲ್ಲಿ ಇದ್ದ ಇಬ್ಬರೊಂದಿಗೆ ಇಳಿದು, ಮಾಲಿಕರ ಮೇಲೆ ಮಚ್ಚಿಯಿಂದ ಆಕ್ರೋಶದಿಂದ ದಾಳಿ ನಡೆಸಿದ್ದಾನೆ.
“ಮಗನೇ ನಮ್ಮ ಹುಡುಗನ ಹತ್ತಿರನೇ ದುಡ್ಡು ಕೇಳುತ್ತಿಯಾ?”
ಈ ಶಬ್ದಗಳಿಂದ ಆರೋಪಿ ಹಾಗೂ ಸಹಚರರು ಆಕ್ರೋಶ ವ್ಯಕ್ತಪಡಿಸಿ, ಅಂಗಡಿಗೆ ನುಗ್ಗಿ ಸಿದ್ದಲಿಂಗಯ್ಯ ಅವರ ಕಾಲರ್ ಹಿಡಿದು ಅಂಗಡಿಯ ಹೊರಗೆ ಎಳೆದು ಹಲ್ಲೆ ನಡೆಸಿದ್ದಾರೆ.
ಸ್ಥಳೀಯರು ಧಾವಿಸುತ್ತಿದ್ದಂತೆ, ತಕ್ಷಣವೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾದ್ರು ಎಂದು ಹೇಳಲಾಗಿದೆ.
ಪೋಲೀಸರ ತನಿಖೆ ಆರಂಭ:
ಘಟನೆಯ ಬಗ್ಗೆ ಪೀಣ್ಯಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೀಣ್ಯಾ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳು ಶೀಘ್ರವೇ ಬಂಧನಕ್ಕೆ ಒಳಗಾಗಲಿದ್ದಾರೆ ಎಂಬ ವಿಶ್ವಾಸವನ್ನು ಪೊಲೀಸರು ಮಾಲಿಕ ಸಿದ್ದಲಿಂಗಯ್ಯಗೆ ತಿಳಿಸಿದ್ದಾರೆ.





