ನವದೆಹಲಿ: ರಾಜಕಾರಣಿಗಳೆಂದರೆ ಐಷಾರಾಮಿ ಕಾರುಗಳಲ್ಲಿ ಓಡಾಡುವವರು ಎಂಬ ಕಾಲದಲ್ಲಿ, ಬೆಂಗಳೂರಿನ ರಾಜಾಜಿನಗರ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಹೊಸ ಇತಿಹಾಸ ಬರೆದಿದ್ದಾರೆ. ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಬರೋಬ್ಬರಿ 702 ಕಿಲೋಮೀಟರ್ ಸೈಕಲ್ ಯಾತ್ರೆ ನಡೆಸಿದ ಇವರ ಸಾಹಸವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಶಾಸಕ ಸುರೇಶ್ ಕುಮಾರ್ ಅವರಿಗೆ ಖುದ್ದಾಗಿ ಫೋನ್ ಕರೆ ಮಾಡಿದ ಪ್ರಧಾನಿ ಮೋದಿ, ಅವರ ದೈಹಿಕ ಕ್ಷಮತೆ ಮತ್ತು ದೃಢ ಮನೋಭಾವವನ್ನು ಅಭಿನಂದಿಸಿದ್ದಾರೆ. ಈ ಕುರಿತು ತಮ್ಮ ‘ಎಕ್ಸ್’ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಸವಾರಿ ಕೈಗೊಂಡ ಸುರೇಶ್ ಕುಮಾರ್ ಅವರ ಸಾಧನೆ ಸ್ಫೂರ್ತಿದಾಯಕ. ಆರೋಗ್ಯದ ಸವಾಲುಗಳನ್ನು ಮೆಟ್ಟಿ ನಿಂತು ಅವರು ಈ ಸಾಧನೆ ಮಾಡಿರುವುದು ಅವರ ಅಚಲ ಮನೋಭಾವವನ್ನು ತೋರಿಸುತ್ತದೆ. ಇದು ಫಿಟ್ನೆಸ್ ಕುರಿತು ದೇಶಕ್ಕೆ ದೊಡ್ಡ ಸಂದೇಶ ನೀಡಿದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಸುರೇಶ್ ಕುಮಾರ್ ಅವರು ಕೇವಲ 5 ದಿನಗಳಲ್ಲಿ 702 ಕಿಲೋಮೀಟರ್ ಕ್ರಮಿಸಿದ್ದಾರೆ. ಇದು ಸಾಮಾನ್ಯ ಸವಾರಿಯಲ್ಲ; 51 ವರ್ಷಗಳ ಸುದೀರ್ಘ ಬಿಡುವಿನ ನಂತರ ಅವರು ಮತ್ತೆ ವಿವೇಕಾನಂದ ಶಿಲಾ ಸ್ಮಾರಕದವರೆಗೆ ಸೈಕಲ್ ಯಾತ್ರೆ ಕೈಗೊಂಡಿರುವುದು ವಿಶೇಷ. 2025ರ ಸಾಲಿನಲ್ಲಿ ಅವರ ತಂಡ ಒಟ್ಟಾರೆಯಾಗಿ 8,000 ಕಿ.ಮೀ. ಸೈಕ್ಲಿಂಗ್ ಮಾಡಿರುವ ಮಾಹಿತಿಯನ್ನು ಕೇಳಿ ಪ್ರಧಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕೆಲವು ಕಾಲದ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಸುರೇಶ್ ಕುಮಾರ್ ಅವರು, ಚಿಕಿತ್ಸೆಯ ನಂತರ ಈ ಸಾಹಸಕ್ಕೆ ಕೈಹಾಕಿದ್ದಾರೆ. ಈ ಅಂಶ ಪ್ರಧಾನಿಗಳ ಗಮನ ಸೆಳೆದಿದ್ದು, ಅನಾರೋಗ್ಯದ ನಂತರದ ಈ ಪ್ರಯತ್ನ ಶ್ಲಾಘನೀಯ ಎಂದು ಮೋದಿಯವರು ಬೆನ್ನು ತಟ್ಟಿದ್ದಾರೆ.
ಪ್ರಧಾನಿಗಳ ಕರೆಯಿಂದ ಪುಳಕಿತರಾದ ಸುರೇಶ್ ಕುಮಾರ್, ಮೋದಿಯವರು ಖುದ್ದಾಗಿ ಕರೆ ಮಾಡಿ ಅಭಿನಂದಿಸಿದ್ದು ನನ್ನ ಪುಣ್ಯ. ಇದು ನನಗೆ ಇನ್ನಷ್ಟು ಸ್ಫೂರ್ತಿ ನೀಡಿದೆ. 51 ವರ್ಷಗಳ ನಂತರ ಸ್ನೇಹಿತರೊಂದಿಗೆ ಕೈಗೊಂಡ ಈ ಯಾತ್ರೆ ನನ್ನ ಜೀವನದ ಸಾರ್ಥಕ ಕ್ಷಣಗಳಲ್ಲಿ ಒಂದು ಎಂದು ಸಂಭ್ರಮ ಹಂಚಿಕೊಂಡಿದ್ದಾರೆ.ಸುರೇಶ್ ಕುಮಾರ್ ಅವರ ಈ ಸೈಕಲ್ ಯಾತ್ರೆ ಕೇವಲ ಸಾಹಸವಲ್ಲ, ಅದು ಇಂದಿನ ಪೀಳಿಗೆಗೆ ಆರೋಗ್ಯ ಮತ್ತು ಶಿಸ್ತಿನ ಪಾಠವಾಗಿಯೂ ಹೊರಹೊಮ್ಮಿದೆ.





